ಬಂಟ್ವಾಳ: ಕೌಟುಂಬಿಕ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ನಡೆದ ಸಣ್ಣ ತಕರಾರು ವಿಕೋಪಕ್ಕೆ ತಿರುಗಿ, ಸಹೋದರನ ಮಗನೇ ತನ್ನ ಚಿಕ್ಕಪ್ಪನಿಗೆ ಬಿಯರ್ ಬಾಟಲಿಯಿಂದ ಕುತ್ತಿಗೆಗೆ ತಿವಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. ಪಿಲಾತಬೆಟ್ಟು ನಿವಾಸಿ ಮಧುಸೂದನ್ (37) ಕೊಲೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಆರೋಪಿ ರಾಹುಲ್ ಎಂಬಾತನನ್ನು ಪುಂಜಾಲಕಟ್ಟೆ ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ದೂರಿನ ವಿವರಗಳ ಪ್ರಕಾರ, ಮೇ 31ರ ಭಾನುವಾರ ರಾತ್ರಿ ಪಿಲಾತಬೆಟ್ಟು ನಿವಾಸಿ ಶೇಖರ (43) ಎಂಬವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಬಂಧುಗಳು ಆಗಮಿಸಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಶೇಖರ ಅವರ ಸಹೋದರನಾದ ಮಧುಸೂದನ್ ಅವರು, ತಮ್ಮ ಮತ್ತೋರ್ವ ಸಹೋದರ ಕೇಶವ ಎಂಬವರ ಮಗನಾದ ರಾಹುಲ್ ಬಳಿ ಕೆಲಸದ ವಿಚಾರವಾಗಿ ಮಾತನಾಡುತ್ತಾ ತಕರಾರು ತೆಗೆದಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಆರೋಪಿ ರಾಹುಲ್, ಕುಟುಂಬಸ್ಥರೆಲ್ಲರ ಎದುರೇ ಅಲ್ಲಿಂದ ಸಿಟ್ಟಿನಿಂದ ಹೊರಟು ಹೋಗಿದ್ದ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
.

ಧಾರ್ಮಿಕ ಕಾರ್ಯಕ್ರಮವೆಲ್ಲ ಮುಗಿದ ಬಳಿಕ ದೂರುದಾರ ಶೇಖರ ಅವರು ಮನೆಯಲ್ಲಿದ್ದಾಗ, ರಾತ್ರಿ ವೇಳೆ ಮನೆಯ ಸಮೀಪ ಜೋರಾಗಿ ಕಿರುಚಾಟ ಮತ್ತು ಬೊಬ್ಬೆ ಕೇಳಿಸಿದೆ. ಗಾಬರಿಗೊಂಡ ಶೇಖರ ಅವರು ತಕ್ಷಣವೇ ಶಬ್ದ ಕೇಳಿಸಿದ ಸ್ಥಳಕ್ಕೆ ಓಡಿ ಹೋಗಿದ್ದಾರೆ. ಅಲ್ಲಿ ಕೆಲಸದ ವಿಚಾರಕ್ಕೆ ದ್ವೇಷ ಸಾಧಿಸಿ ಹೊಂಚು ಹಾಕಿ ಕುಳಿತಿದ್ದ ಆರೋಪಿ ರಾಹುಲ್, ಬಿಯರ್ ಬಾಟಲಿಯಿಂದ ಚಿಕ್ಕಪ್ಪ ಮಧುಸೂದನ್ ಅವರ ಕುತ್ತಿಗೆಯ ಭಾಗಕ್ಕೆ ಬಲವಾಗಿ ತಿವಿದಿರುವುದು ಬೆಳಕಿಗೆ ಬಂದಿದೆ.
ತೀವ್ರ ರಕ್ತಸ್ರಾವವಾಗಿ ಮಧುಸೂದನ್ ಅವರು ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕುಟುಂಬಸ್ಥರು ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಅಲ್ಲಿನ ವೈದ್ಯರು ಮಧುಸೂದನ್ ಅವರನ್ನು ಪರೀಕ್ಷಿಸಿ, ಅವರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮುಗ್ಧ ಪ್ರಾಣವೊಂದು ಕೌಟುಂಬಿಕ ಕಲಹಕ್ಕೆ ಬಲಿಯಾಗಿರುವುದು ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.
ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ಶೇಖರ ಅವರು ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 58/2026, ಕಲಂ: 103 BNS (ಭಾರತೀಯ ನ್ಯಾಯ ಸಂಹಿತೆ) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪುಂಜಾಲಕಟ್ಟೆ ಪೊಲೀಸರು ಆರೋಪಿ ರಾಹುಲ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.