ಕಾಸರಗೋಡು: ಹೊಸ ಮನೆಗೆ ಗೃಹಪ್ರವೇಶ ಮಾಡಿ ಕೇವಲ ಒಂದು ತಿಂಗಳಷ್ಟೇ ಕಳೆದಿದ್ದ ಸೈನಿಕನ ಪತ್ನಿಯೊಬ್ಬರು ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ಕರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ಮಂತೋಡಿ ಸಮೀಪದ ಮೂಡಂಕುಲಂನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಮೃತರನ್ನು ನಾಗಾಲ್ಯಾಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಸೇನಾ ಸಿಬ್ಬಂದಿ ರಾಜೇಶ್ ಕುಮಾರ್ ಅವರ ಪತ್ನಿ ಸೌಪರ್ಣಿಕಾ (41) ಎಂದು ಗುರುತಿಸಲಾಗಿದೆ. ಶನಿವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ಹೊಸ ಮನೆಯ ಮೇಲಿನ ಮಹಡಿಯಲ್ಲಿರುವ ಬೆಡ್‌ರೂಂನ ಸೀಲಿಂಗ್ ಫ್ಯಾನ್‌ಗೆ ಸೌಪರ್ಣಿಕಾ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಸಂಬಂಧಿಕರು ಮತ್ತು ನೆರೆಹೊರೆಯವರು ಅವರನ್ನು ಕೆಳಗಿಳಿಸಿ ಮುಳ್ಳೇರಿಯಾದ ಆಸ್ಪತ್ರೆಗೆ ಕೊಂಡೊಯ್ದರಾದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
.


ಗೃಹಪ್ರವೇಶವಾಗಿ ತಿಂಗಳಷ್ಟೇ ಆಗಿತ್ತು:
ಮೂಲತಃ ನೆರೆಯ ಮುಳಿಯಾರು ಪಂಚಾಯತ್‌ನ ಪಾದನಡ್ಕದವರಾದ ಸೌಪರ್ಣಿಕಾ ಹಾಗೂ ರಾಜೇಶ್ ಕುಮಾರ್ ದಂಪತಿ ಕೇವಲ ಒಂದು ತಿಂಗಳ ಹಿಂದೆಯಷ್ಟೇ ಹೊಸದಾಗಿ ನಿರ್ಮಿಸಿದ ಮನೆಗೆ ಗೃಹಪ್ರವೇಶ ಮಾಡಿ ವಾಸಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿದ ನಂತರ ರಾಜೇಶ್ ಕುಮಾರ್ ಅವರು ನಾಗಾಲ್ಯಾಂಡ್‌ಗೆ ವಾಪಸ್ ಕರ್ತವ್ಯಕ್ಕೆ ತೆರಳಿದ್ದರು. ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಶುಕ್ರವಾರ ತಡರಾತ್ರಿ 11.30ರ ನಂತರ ಈ ಘಟನೆ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಆದೂರು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 194ರ ಅಡಿಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪತಿ ರಾಜೇಶ್ ಕುಮಾರ್ ಅವರು ನಾಗಾಲ್ಯಾಂಡ್‌ನಿಂದ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.