
ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ಸಹಕಾರಿ ಸಂಘಗಳು ಇಷ್ಟು ಉನ್ನತ ಸ್ಥಾನಕ್ಕೆ ಏರಲು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸ್ಪರ್ಧೆ ನೀಡುವಂತಾಗಲು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ ಎನ್ ರಾಜೇಂದ್ರ ಕುಮಾರ್ ರವರ ದಿಟ್ಟ ನಿಲುವು, ಮಾರ್ಗದರ್ಶನ ಕಾರಣವಾಗಿದೆ ಎಂದು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಸಹಕಾರ ರತ್ನ ಎಚ್ ವಸಂತ ಬರ್ನಾರ್ಡ್ ನುಡಿದರು.

ಕರ್ನಾಟಕ ಸರಕಾರದ ಸಹಕಾರ ಇಲಾಖೆ ಮತ್ತು ಸಹಕಾರ ಮಹಾಮಂಡಲ ಇದರ ವತಿಯಿಂದ ಸಹಕಾರ ರತ್ನ ಪ್ರಶಸ್ತಿ ಪಡೆದ ಎಚ್ ವಸಂತ್ ಬರ್ನಾಡ್ ರವರನ್ನು ಪ್ರಿಯದರ್ಶಿನಿ ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ದಿವಂಗತ ಎಚ್. ನಾರಾಯಣ ಸನಿಲ್ ರವರ ಮಾರ್ಗದರ್ಶನದಲ್ಲಿ ಸಹಕಾರಿ ಚಳುವಳಿಗೆ ಪಾದರ್ಪಣೆ ಮಾಡಿ ಕಳೆದ 27 ವರ್ಷಗಳಿಂದ ಸಹಕಾರಿ ಚಳುವಳಿ ಮಾಡುತ್ತಾ ಬಂದಿದ್ದು ,ಪ್ರಸ್ತುತ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅ ಮೂಲಕ ಸಹಕಾರಿ ಚಳುವಳಿಗೆ ಮತ್ತಷ್ಟು ಶಕ್ತಿ ನೀಡಿದ್ದೇನೆ. ಸಹಕಾರಿ ಸಂಘದಲ್ಲಿ ಕೇವಲ ಹಣಕಾಸಿನ ವ್ಯವಹಾರ ಮಾತ್ರವೇ ಮಾಡದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ ತೃಪ್ತಿ ನನಗಿದೆ.
ಸಹಕಾರಿ ಚಳುವಳಿಯ ಮೂಲಕ ಗ್ರಾಮೀಣ ಪ್ರದೇಶದ ಬಡ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ ತನ್ಮೂಲಕ ಅನೇಕ ಅಶಕ್ತರಿಗೆ ದಾರಿದೀಪವಾಗಿದೆ. ಸಹಕಾರಿ ಚಳುವಳಿಯ ನನ್ನ ಈ ಕಿಂಚಿತ್ತು ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರವು ವಿಶೇಷವಾಗಿ ಡಾ. ಎಂ ಎನ್ ರಾಜೇಂದ್ರಕುಮಾರ್ ರವರು ಸಹಕಾರ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿರುವುದು ಇನ್ನಷ್ಟು ಸ್ಪೂರ್ತಿ ತಂದಿದೆ.
ಈ ಸಂದರ್ಭದಲ್ಲಿ ನನ್ನನ್ನು ಸಾರ್ವಜನಿಕವಾಗಿ ಗೌರವಿಸಬೇಕು ಅಭಿನಂದಿಸಬೇಕು ಎಂಬ ಚಿಂತನೆ ನನ್ನ ಮಿತ್ರರದ್ದು. ಆದರೆ ನನ್ನ ಸಹಕಾರಿ ಚಳುವಳಿ ಅಂತಿಮವಾಗಿಲ್ಲ , ಈಗ ಪಡೆದ ಪ್ರಶಸ್ತಿ ಕೇವಲ ನಾಲ್ಕು ಮೆಟ್ಟಲಿನ ಪ್ರಶಸ್ತಿ, ನನ್ನ ಚಳುವಳಿ ಮುಂದುವರಿಬೇಕು… ಆದ್ದರಿಂದ ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮ ನಡೆಸುವುದು ಬೇಡ ಎಂಬ ನನ್ನ ಕೋರಿಕೆಯ ಮೇರೆಗೆ ಇಂದು ಪ್ರಿಯದರ್ಶಿನಿಯ ಸೊಸೈಟಿಯ ಆಡಳಿತ ಮಂಡಳಿಯವರು ಮತ್ತು ನನ್ನ ಸಿಬ್ಬಂದಿ ವರ್ಗದವರು ಜೊತೆ ಕೂಡಿ ಗೌರವಿಸುತ್ತಿರುವುದು ಸಂತೋಷವೇ ಸರಿ. ಈ ಗೌರವಕ್ಕೆ ನಾನು ಸದಾ ಚಿರಋಣಿ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿಯ ಉಪಾಧ್ಯಕ್ಷರಾದ ವಿಜಯಕುಮಾರ್ ಸನಿಲ್ ಅವರು ವಹಿಸಿದ್ದರು. ನಿರ್ದೇಶಕರಾದ ಧನಂಜಯ ಮಟ್ಟು ಅಭಿನಂದನಾ ಭಾಷಣ ನುಡಿದರು. ನಿರ್ದೇಶಕರಾದ ಗಣೇಶ್ ಪ್ರಸಾದ್ ದೇವಾಡಿಗ ಸ್ವಾಗತಿಸಿ, ಮುಖ್ಯ ಕಾರ್ಯನಿರ್ಧಿಕಾರಿ ಸುದರ್ಶನ್ ಪೂಜಾರಿ ವಂದಿಸಿದರು.
ಹಿರಿಯ ಶಾಖಾ ಪ್ರಬಂಧಕರಾದ ಅಕ್ಷತಾ ಶೆಟ್ಟಿ ಮತ್ತು ಹಿತ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರುಗಳಾದ ಉಮಾನಾಥ ಜೆ. ಶೆಟ್ಟಿಗಾರ್, ಜೈ ಕೃಷ್ಣ ಕೋಟ್ಯಾನ್, ಅನಿಲ್ ಪೂಜಾರಿ ಸಸಿಹಿತ್ಲು, ಹರೀಶ್ ಪುತ್ರನ್, ಡಾ.ಶೆರೀಲ್ ಅಯೊನ, ಐಮನ್, ರೇಖಾ ಶೆಟ್ಟಿ, ಮೋಹನ್ ದಾಸ್, ನವೀನ್ ಸಾಲಿಯಾನ್, ಕರಿಯ ಕಾಡಿಗ, ಹಾಗೂ ಶಾಖಾ ಪ್ರಬಂಧಕರುಗಳಾದ ಮೋಹನ್ ದಾಸ್, ಪ್ರಜ್ಞಶ್ರೀ, ಅಭಿಸ್ಟಾ ಜೈನ್, ಅಂಜಲಿ ಮೊದಲಾದವರು ಉಪಸ್ಥಿತರಿದ್ದರು..