ಮದುವೆಯಾದ ಬಳಿಕ ಹೆಂಡತಿ ತನ್ನ ಹೆಸರಿನ ಜೊತೆ ಗಂಡನ ಹೆಸರನ್ನು ಸೇರಿಸಿಕೊಳ್ಳುವುದು ಭಾರತೀಯ ಸಂಸ್ಕೃತಿಯೇ ಅಲ್ಲ! – ವಿದ್ವಾನ್ ಜಗದೀಶ ಶರ್ಮಾ ಸಂಪ ವಿಶ್ಲೇಷಣೆ

ಮಂಗಳೂರು: ಇಂದಿನ ಆಧುನಿಕ ಸಮಾಜದಲ್ಲಿ ಮದುವೆಯಾದ ತಕ್ಷಣವೇ ಹೆಣ್ಣುಮಕ್ಕಳು ತಮ್ಮ ಹೆಸರಿನ ಕೊನೆಯಲ್ಲಿ ಗಂಡನ ಹೆಸರನ್ನು ಕಡ್ಡಾಯವಾಗಿ ಜೋಡಿಸಿಕೊಳ್ಳುವ ಪದ್ಧತಿ ಅತ್ಯಂತ ಸಾಮಾನ್ಯವಾಗಿದೆ. ಒಂದು ವೇಳೆ ಇಂದಿನ ಯುವತಿಯರು ಯಾರಾದರೂ ಹಾಗೆ ಹೆಸರು ಬದಲಾಯಿಸಿಕೊಳ್ಳಲು ನಿರಾಕರಿಸಿದರೆ, ಮನೆಯ ಹಿರಿಯರು ಹಾಗೂ ಸಮಾಜದ ಜನ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸುವುದನ್ನು ನಾವು ನೋಡುತ್ತೇವೆ. ಆದರೆ, ಇಂದಿನ ಸಮಾಜವು ‘ಸಂಪ್ರದಾಯ’ ಎಂದು ನಂಬಿಕೊಂಡಿರುವ ಈ ಪದ್ಧತಿಯು ಮೂಲ ಭಾರತೀಯ ಸಂಸ್ಕೃತಿಯಲ್ಲಿ ಇಲ್ಲವೇ ಇಲ್ಲ ಎಂಬ ರೋಚಕ ಸತ್ಯವನ್ನು ಹಿರಿಯ ವಿದ್ವಾಂಸರಾದ ಜಗದೀಶ ಶರ್ಮಾ ಸಂಪ ಅವರು ಸಾಧಾರವಾಗಿ ಯೂಟ್ಯೂಬ್‌ ಚಾನೆಲ್‌ ಒಂದರಲ್ಲಿ ಬಿಚ್ಚಿಟ್ಟಿದ್ದಾರೆ.

ನಮ್ಮ ನೈಜ ಪ್ರಾಚೀನ ಭಾರತೀಯ ಪರಂಪರೆಯನ್ನು ತಿರುಗಿ ನೋಡಿದರೆ, ಅಲ್ಲಿ ಹೆಣ್ಣು ಗಂಡನ ಹೆಸರನ್ನು ಇಟ್ಟುಕೊಳ್ಳುವ ಕ್ರಮ ಇರಲಿಲ್ಲ; ಬದಲಾಗಿ ಗಂಡನೇ ತನ್ನ ಹೆಸರಿಗಿಂತ ಮುಂಚಿತವಾಗಿ ಹೆಂಡತಿಯ ಹೆಸರನ್ನು ಅತ್ಯಂತ ಗೌರವದಿಂದ ಜೋಡಿಸಿಕೊಳ್ಳುವ ಅದ್ಭುತ ಸಂಸ್ಕೃತಿ ನಮ್ಮದಾಗಿತ್ತು. ಇದಕ್ಕೆ ಪುರಾವೆಯಾಗಿ ನಮ್ಮ ಸನಾತನ ಧರ್ಮದ ಆದರ್ಶ ದೇವಾನುದೇವತೆಗಳ ಹೆಸರುಗಳೇ ಸಾಕ್ಷಿಯಾಗಿವೆ. ನಾವು ಭಕ್ತಿಯಿಂದ ಕರೆಯುವ ಸೀತಾರಾಮ (ಸೀತೆ-ರಾಮ), ರಾಧಾಕೃಷ್ಣ (ರಾಧೆ-ಕೃಷ್ಣ), ಉಮಾಮಹೇಶ್ವರ (ಪಾರ್ವತಿ-ಶಿವ) ಹಾಗೂ ಲಕ್ಷ್ಮಿನಾರಾಯಣ (ಲಕ್ಷ್ಮಿ-ವಿಷ್ಣು) ಎಂಬ ಹೆಸರುಗಳಲ್ಲೆಲ್ಲಾ ಹೆಣ್ಣಿನ ಹೆಸರೇ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಪುರುಷರಿಗೆ ಇಂದಿಗೂ ‘ಲಕ್ಷ್ಮಿನಾರಾಯಣ’ ಎಂಬ ಹೆಸರನ್ನು ಇಡುವ ಸಂಪ್ರದಾಯವಿರುವುದೇ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

.

 

ನಮ್ಮ ಭವ್ಯ ಇತಿಹಾಸ ಮತ್ತು ಪುರಾಣಗಳ ಪುಟಗಳನ್ನು ಎಷ್ಟು ಹುಡುಕಿದರೂ ಎಲ್ಲೂ ಕೂಡ ‘ಕುಂತಿ ಪಾಂಡು’ ಅಥವಾ ‘ದ್ರೌಪದಿ ಯುಧಿಷ್ಠರ್’ ಎಂದು ಹೆಣ್ಣಿನ ಹೆಸರಿನ ಹಿಂದೆ ಗಂಡನ ಹೆಸರನ್ನು ಬಲವಂತವಾಗಿ ಜೋಡಿಸಿದ ಒಂದೇ ಒಂದು ಉಲ್ಲೇಖವೂ ನಮಗೆ ಕಾಣಸಿಗುವುದಿಲ್ಲ. ಹಾಗಾದರೆ ಇಂದಿನ ಸಮಾಜವನ್ನು ಆವರಿಸಿರುವ ಈ ಪದ್ಧತಿ ಭಾರತಕ್ಕೆ ಬಂದಿದ್ದು ಎಲ್ಲಿಂದ ಎನ್ನುವುದಕ್ಕೆ ಉತ್ತರ ಪಾಶ್ಚಿಮಾತ್ಯ ಇತಿಹಾಸದಲ್ಲಿದೆ. ಬ್ರಿಟಿಷರು ಭಾರತವನ್ನು ಆಳಲು ಬಂದ ಮೇಲೆ, ಅವರ ದೇಶದಲ್ಲಿದ್ದ ಪದ್ಧತಿಯನ್ನು ನಮ್ಮ ದೇಶದ ಮೇಲೂ ಹೇರಿದರು. ಕಾಲಕ್ರಮೇಣ ಅವರ ಆ ಪ್ರಭಾವದಿಂದ ಈ ಪದ್ಧತಿ ನಮ್ಮ ಸಂಸ್ಕೃತಿಯೊಳಗೆ ನುಸುಳಿತು.

ದುರಂತವೆಂದರೆ, ಬ್ರಿಟಿಷರ ಆಡಳಿತಾವಧಿಯಲ್ಲಿ ಬಂದ ಇನ್ಯಾರದೋ ಗುಲಾಮಿ ಸಂಸ್ಕೃತಿಯನ್ನು ನಾವಿಂದು ನಮ್ಮದೇ ‘ಮೂಲ ಸನಾತನ ಸಂಸ್ಕೃತಿ’ ಎಂದು ತಪ್ಪಾಗಿ ಗ್ರಹಿಸಿ ಅಪ್ಪಿ ಕುಳಿತಿದ್ದೇವೆ. ಅಷ್ಟೇ ಅಲ್ಲದೆ, ಈ ತಪ್ಪು ಪದ್ಧತಿಯನ್ನು ಮುಂದಿಟ್ಟುಕೊಂಡು ನಮ್ಮ ಇತಿಹಾಸದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಮತ್ತು ಬೆಲೆಯೇ ಇರಲಿಲ್ಲ ಎಂದು ಇಂದಿನ ತಲೆಮಾರು ದೂಷಿಸಲು ಶುರು ಮಾಡಿಕೊಂಡಿದೆ. ಯಾವುದೋ ಕಾಲದಲ್ಲಿ ಪರಕೀಯರ ಪ್ರಭಾವಕ್ಕೆ ಒಳಗಾಗಿ ಸೇರಿಸಿಕೊಂಡ ತಪ್ಪು ಪದ್ಧತಿಗಳನ್ನು ಇಟ್ಟುಕೊಂಡು ವಾದಿಸುವ ಬದಲಾಗಿ, ಹೆಣ್ಣಿಗೆ ಜಗತ್ತಿನಲ್ಲೇ ಅತ್ಯುನ್ನತ ಗೌರವ ನೀಡಿದ್ದ ನಮ್ಮ ದೇಶದ ನೈಜ ಇತಿಹಾಸವನ್ನು ಇಂದಿನ ಸಮಾಜ ಅರಿತುಕೊಳ್ಳಬೇಕಿದೆ ಎಂದು ಜಗದೀಶ ಶರ್ಮಾ ಸಂಪ ಅವರು ಈ ವಿಶೇಷ ವಿಶ್ಲೇಷಣೆಯಲ್ಲಿ ಕಳಕಳಿ ವ್ಯಕ್ತಪಡಿಸಿದ್ದಾರೆ.

error: Content is protected !!