ಬೆಂಗಳೂರು: ಮಹಿಳಾ ಹೆಣಗಳ ಫೋಟೋ ತೆಗೆದು ಮಾನ ಹರಾಜು ಹಾಕಿದ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯ ಆ ಘೋರ ವಿಕೃತಿಯ ವಿರುದ್ಧ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಹೆಣ್ಣು ಬದುಕಿದ್ದಾಗ ಮಾತ್ರವಲ್ಲ, ಸತ್ತ ಮೇಲೂ ಆಕೆಯ ದೇಹಕ್ಕೆ ರಕ್ಷಣೆ ಇಲ್ಲದ ಕಟು ವಾಸ್ತವವನ್ನು ಈ ಘಟನೆ ಬಿಚ್ಚಿಟ್ಟಿದ್ದು, ಸದ್ಯ ರಾಜ್ಯ ಮಹಿಳಾ ಆಯೋಗವು (Karnataka Women’s Commission) ಈ ಅಮಾನವೀಯ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಖಾಡಕ್ಕಿಳಿದಿದೆ.

ಬೀದರ್ ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ (Mortuary) ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಮುನೀರ್ ಅಹಮದ್, ಸತ್ತ ಮಹಿಳೆಯರ ಬೆತ್ತಲೆ ಫೋಟೋ ಹಾಗೂ ವೀಡಿಯೋಗಳನ್ನು ಕ್ಲಿಕ್ಕಿಸಿ ತನ್ನ ವಿಕೃತಿ ಮೆರೆದಿರುವ ಅಮಾನುಷ ಕೃತ್ಯ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಂದೋಲನ ಸೃಷ್ಟಿಸಿತ್ತು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
.


ಈ ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ರಾಜ್ಯ ಮಹಿಳಾ ಆಯೋಗವು, ತಪ್ಪಿತಸ್ಥ ಅಟೆಂಡರ್ ಮುನೀರ್ ಅಹಮದ್ ವಿರುದ್ಧ ಕೂಡಲೇ ನಿಯಮಾನುಸಾರ ಕಾನೂನು ಕ್ರಮ ಜರುಗಿಸಬೇಕು ಎಂದು ಆರೋಗ್ಯ ಇಲಾಖೆಗೆ ಖಡಕ್ ತಾಕೀತು ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ, ಕೂಡಲೇ ಆಯೋಗಕ್ಕೆ ಲಿಖಿತ ವರದಿ ಸಲ್ಲಿಸುವಂತೆ ಮಹಿಳಾ ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಕಠಿಣ ನಿರ್ದೇಶನ ನೀಡಿದ್ದಾರೆ.
ಕೇವಲ ಅಮಾನತು ಅಥವಾ ತನಿಖೆಯ ನಾಟಕವಾಡದೆ, ಮುನೀರ್ ಅಹಮದ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರಿ ಆಸ್ಪತ್ರೆಗಳ ಶವಾಗಾರಗಳಲ್ಲಿ ಬಿಗಿ ಭದ್ರತೆ ಹಾಗೂ ಸಿಸಿಟಿವಿ ಕಣ್ಗಾವಲು ಅಳವಡಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.