ಜ್ಯೋತಿಷಿ ದ್ವಾರಕಾನಾಥ್ ಕೊಟ್ಟ 3 ಮುಹೂರ್ತ: ಸೋಮವಾರ ಗೋಧೂಳಿ ಲಗ್ನದಲ್ಲಿ, ಅರಮನೆ ಮೈದಾನದಲ್ಲಿ ಡಿಕೆಶಿ ಪ್ರಮಾಣವಚನ?

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿರುವ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ಬೆಳಗ್ಗೆ ಅಧಿಕೃತವಾಗಿ ಅಂಗೀಕರಿಸಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರ ಸಾರಥ್ಯದ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲು ಹಾದಿ ಸುಗಮವಾಗಿದೆ.

ಹೊಸ ಸಚಿವ ಸಂಪುಟದ ಪ್ರಮಾಣವಚನ ಕಾರ್ಯಕ್ರಮದ ಅಧಿಕೃತ ದಿನಾಂಕ ಇನ್ನೂ ಪ್ರಕಟವಾಗಿಲ್ಲವಾದರೂ, ತೆರೆಮರೆಯಲ್ಲಿ ಅದ್ಧೂರಿ ಸಿದ್ಧತೆಗಳು ನಡೆದಿವೆ. ದೈವಭಕ್ತರಾಗಿರುವ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕಾರಕ್ಕೆ ಅತ್ಯುತ್ತಮ ಮುಹೂರ್ತದ ಹುಡುಕಾಟದಲ್ಲಿದ್ದಾರೆ. ಈಗಾಗಲೇ ತಮ್ಮ ಆಪ್ತ ಜ್ಯೋತಿಷಿ ದ್ವಾರಕಾನಾಥ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿರುವ ಅವರು, ಮೂರು ಶ್ರೇಷ್ಠ ಮುಹೂರ್ತಗಳನ್ನು ನಿಗದಿಪಡಿಸುವಂತೆ ಕೋರಿದ್ದಾರೆ. ಮೂಲಗಳ ಪ್ರಕಾರ, ಜ್ಯೋತಿಷಿಗಳ ಸಲಹೆಯಂತೆ ಮುಂಬರುವ ಸೋಮವಾರ ಸಂಜೆ ʻಗೋಧೂಳಿ ಮುಹೂರ್ತ’ದಲ್ಲಿ ಪ್ರಮಾಣವಚನ ಸ್ವೀಕರಿಸಲು ಡಿಕೆಶಿ ಒಲವು ತೋರಿದ್ದಾರೆ ಎನ್ನಲಾಗಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಗುರುವಾರ ನಡೆದ ಸಚಿವ ಸಂಪುಟದ ಉಪಹಾರ ಸಭೆಯಲ್ಲಿ, “ನನ್ನ ನಂತರ ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ” ಎಂದು ಸಿದ್ದರಾಮಯ್ಯ ಅವರು ಸಚಿವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದರು. ಸದ್ಯ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ದೆಹಲಿಯಲ್ಲಿದ್ದು, ಹೈಕಮಾಂಡ್ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ನೂತನ ಮುಖ್ಯಮಂತ್ರಿಯ ಪ್ರಮಾಣವಚನದ ದಿನಾಂಕದ ಜೊತೆಗೆ, ಹೊಸ ಸಚಿವ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ನೀಡಬೇಕು ಎಂಬ ಸಂಪುಟ ಕಸರತ್ತು ದೆಹಲಿ ಮಟ್ಟದಲ್ಲಿ ಚುರುಕಾಗಿದೆ. ಹೈಕಮಾಂಡ್ ಹಸಿರು ನಿಶಾನೆ ನೀಡಿದ ತಕ್ಷಣವೇ ಪ್ರಮಾಣವಚನ ನಡೆಯುವ ಅಧಿಕೃತ ಸ್ಥಳ ಮತ್ತು ದಿನಾಂಕ ಹೊರಬೀಳಲಿದೆ.

ರಾಜ್ಯದ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭವನ್ನು ಅತ್ಯಂತ ಅದ್ಧೂರಿಯಾಗಿ ಹಾಗೂ ಐತಿಹಾಸಿಕವಾಗಿ ನಡೆಸಲು ಕಾಂಗ್ರೆಸ್ ಉದ್ದೇಶಿಸಿದೆ. ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದ ನಿಖರವಾದ ಸ್ಥಳವನ್ನು ಪಕ್ಷ ಇನ್ನೂ ಅಧಿಕೃತವಾಗಿ ಪ್ರಕಟಿಸಬೇಕಿದೆ. ಆದರೆ, ಬೆಂಗಳೂರಿನ ಅರಮನೆ ಮೈದಾನ (Palace Grounds) ಅಥವಾ ಕಂಠೀರವ ಕ್ರೀಡಾಂಗಣದ (Kanteerava Stadium) ಪೈಕಿ ಒಂದು ಕಡೆ ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ದೆಹಲಿಯ ಸಭೆಯ ಬಳಿಕ ಈ ಗೊಂದಲಕ್ಕೂ ತೆರೆ ಬೀಳಲಿದೆ.

ಕರ್ನಾಟಕದಲ್ಲಿ ನಡೆಯಲಿರುವ ಈ ಸತ್ತಾ ಬದಲಾವಣೆಯ ಮಹೋತ್ಸವಕ್ಕೆ ದೇಶದ ಪ್ರಮುಖ ರಾಜಕೀಯ ನಾಯಕರು ಸಾಕ್ಷಿಯಾಗಲಿದ್ದಾರೆ.

error: Content is protected !!