ಮಂಗಳೂರು: ನಗರದ ಬಳ್ಳಾಲ್ ಬಾಗ್ ಜಂಕ್ಷನ್ ಬಳಿ ಮೇ 26ರ ಮಂಗಳವಾರ ತಡರಾತ್ರಿ ಕಾರ್ ಢಿಕ್ಕಿ ಹೊಡೆದ ಪರಿಣಾಮ ಕರ್ತವ್ಯದಲಿದ್ದ ಇಬ್ಬರು ಸಂಚಾರ ಪೊಲೀಸರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಮಂಗಳೂರು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಕುಮಾರ್ (35) ಹಾಗೂ ಹೆಡ್ ಕಾನ್ಸ್ಟೇಬಲ್ ವಿಠಲ ದಾಸ್ (51) ಗಾಯಗೊಂಡವರು. ಢಿಕ್ಕಿ ಹೊಡೆದ ಕಾರನ್ನು ಭಾಗವತ ಧೀರಜ್ ರೈ ಎಂಬಾತ ಚಲಾಯಿಸುತ್ತಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇವರಿಬ್ಬರು ರಾತ್ರಿ ಗಸ್ತಿಗಾಗಿ ಠಾಣಾ ಜಿಡಿ ಪ್ರಭಾರದಲ್ಲಿದ್ದರು. ಅದೇ ಸಮಯದಲ್ಲಿ ಬಳ್ಳಾಲ್ ಬಾಗ್ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ನಡೆದಿರುವ ಬಗ್ಗೆ ನಿಸ್ತಂತು (ವೈರ್‌ಲೆಸ್) ಕೊಠಡಿಯಿಂದ ಮಾಹಿತಿ ಲಭಿಸಿತ್ತು. ತಕ್ಷಣವೇ ಹೆಚ್‌ಸಿ ವಿಠಲ ದಾಸ್ ಅವರನ್ನು ಬೈಕಿನ ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಪಿಸಿ ಕುಮಾರ್ ಅವರು ಸ್ಥಳಕ್ಕೆ ಧಾವಿಸಿದ್ದರು.

ಅಲ್ಲಿ ಅಪಘಾತಕ್ಕೊಳಗಾಗಿದ್ದ ಸವಾರರ ವಿವರ ಪಡೆದು, ವಾಹನಗಳನ್ನು ಠಾಣೆಗೆ ಬರುವಂತೆ ಸೂಚಿಸಿ ವಾಪಸ್ ಹೊರಡಲು ಸಿದ್ಧರಾಗುತ್ತಿದ್ದರು. ರಸ್ತೆ ಬದಿಯಲ್ಲೇ ನಿಂತಿದ್ದ ಪೊಲೀಸರ ಮೇಲೇರಿದ ಕಾರುರಾತ್ರಿ ಸುಮಾರು 11:30ರ ವೇಳೆಗೆ ಬಳ್ಳಾಲ್ ಬಾಗ್ ಇನ್ವೆಂಜರ್ ಟೆಕ್ನೋ ಕಟ್ಟಡದ ಎದುರು ರಸ್ತೆ ಬದಿಯಲ್ಲಿ ಪೊಲೀಸರಿಬ್ಬರೂ ನಿಂತುಕೊಂಡಿದ್ದಾಗ ಕರಾವಳಿಯ ರಸ್ತೆಯಲ್ಲಿ ಕಾರೊಂದು ಧಾವಿಸಿ ಬಂದಿದೆ.

ಬಳ್ಳಾಲ್ ಬಾಗ್ ಕಡೆಯಿಂದ ದುರ್ಗಾಮಹಲ್ ಕಡೆಗೆ ತೆರಳುತ್ತಿದ್ದ ಕಾರನ್ನು (KA-19-MP-9623) ಅದರ ಚಾಲಕ ಧೀರಜ್ ರೈ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾಗಿ ಆರೋಪ ಕೇಳಿಬಂದಿದೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿದ್ದ ಇಬ್ಬರು ಪೊಲೀಸರಿಗೆ ನೇರವಾಗಿ ಗುದ್ದಿದೆ. ಢಿಕ್ಕಿ ಹೊಡೆದರಭಸಕ್ಕೆ ಹೆಡ್ ಕಾನ್ಸ್ಟೇಬಲ್ ವಿಠಲ ದಾಸ್ ಅವರು ರಸ್ತೆಗೆ ಸಬಲವಾಗಿ ಎಸೆಯಲ್ಪಟ್ಟಿದ್ದಾರೆ. ಪರಿಣಾಮವಾಗಿ ಅವರ ಬೆನ್ನುಮೂಳೆಗೆ ತೀವ್ರ ಸ್ವರೂಪದ ಆಘಾತಕಾರಿಯಾದ ಗಾಯಗಳಾಗಿವೆ. ಇದೇ ವೇಳೆ ಕಾನ್ಸ್ಟೇಬಲ್ ಕುಮಾರ್ ಅವರ ಎಡಗಾಲಿನ ಮೇಲೆಯೇ ಕಾರಿನ ಚಕ್ರ ಹರಿದು ಹೋಗಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ.

ತಕ್ಷಣವೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಗಾಯಾಳು ಪೊಲೀಸರನ್ನು ಉಪಚರಿಸಿ, ಅಪಘಾತವೆಸಗಿದ ಅದೇ ಕಾರಿನ ಮೂಲಕ ಕೊಡಿಯಾಲ್‌ಬೈಲ್‌ನ ಯೆನಪೋಯ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಚಾಲಕ ಧೀರಜ್ ರೈ ವಿರುದ್ಧ ಪ್ರಕರಣ ದಾಖಲುಘಟನೆಗೆ ಸಂಬಂಧಿಸಿದಂತೆ ಗಾಯಾಳು ಪೊಲೀಸ್ ಸಿಬ್ಬಂದಿ ಕುಮಾರ್ ಅವರು ಆಸ್ಪತ್ರೆಯಿಂದಲೇ ನೀಡಿದ ಲಿಖಿತ ದೂರಿನ ಮೇರೆಗೆ ಮಂಗಳೂರು ಪಶ್ಚಿಮ ಸಂಚಾರ ಠಾಣೆಯ ಪಿಎಸ್‌ಐ ಮಂಜುಳಾ ಪಿ. ಅವರು ಕಾರು ಚಾಲಕ ಧೀರಜ್ ರೈ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 281 ಮತ್ತು 125(b) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.