ಕಾಸರಗೋಡು: ಇತರ ಮಹಿಳೆಯರೊಂದಿಗೆ ವಾಟ್ಸಾಪ್ ಚಾಟಿಂಗ್ ಮತ್ತು ಫೋನ್ ಸಂಭಾಷಣೆ ನಡೆಸುತ್ತಿದ್ದನ್ನು ಪ್ರಶ್ನಿಸಿದ ಪತ್ನಿಗೆ ಪತಿಯೇ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಕುಂಬ್ಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕುಂಬ್ಳೆ ಪೊಲೀಸರು ಬುಧವಾರ ಪತಿ ಕರೀಮ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಂಬ್ಳೆ ಪಂಚಾಯತ್ ವ್ಯಾಪ್ತಿಯ ಬಂದಿಯೋಡು ಸಮೀಪದ ಅಡ್ಕ ನಿವಾಸಿ ಖದೀಜತ್ ಕುಬ್ರಾ (40) ನೀಡಿದ ದೂರಿನ ಮೇರೆಗೆ ಆಕೆಯ ಪತಿ ಕರೀಮ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಮೇ 25 ರಂದು ಮುಂಜಾನೆ ಸುಮಾರು 1:15 ರ ಸುಳಿಯಲ್ಲಿ ಕುಬನೂರು ಅಡ್ಕದಲ್ಲಿರುವ ಇವರ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪತಿ ಕರೀಮ್ ಇತರ ಮಹಿಳೆಯರೊಂದಿಗೆ ನಿರಂತರ ಸಂಪರ್ಕದಲ್ಲಿರುವುದನ್ನು ಗಮನಿಸಿದ ಖದೀಜತ್ ಕುಬ್ರಾ, ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಕೋಪೋದ್ರಿಕ್ತನಾದ ಕರೀಮ್, ಪತ್ನಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ, ಆಕೆಯ ಎಡಗೈ ಕಿರುಬೆರಳನ್ನು ತಿರುಚಿ, ಉಗುರನ್ನು ಮುರಿದು ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ದಾಳಿಯಿಂದ ತೀವ್ರವಾಗಿ ಗಾಯಗೊಂಡ ಖದೀಜತ್ ಕುಬ್ರಾ, ತಕ್ಷಣವೇ ಸ್ಥಳೀಯ ಡಾಕ್ಟರ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಈ ಕುರಿತು ಕುಂಬ್ಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿ ಕರೀಮ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 126 (ಅಕ್ರಮ ತಡೆ ಅಥವಾ ದಿಗ್ಬಂಧನ) ಮತ್ತು ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಅಡಿಯಲ್ಲಿ ಮೊಕದ್ದಮೆ ಹೂಡಿದ್ದು, ತನಿಖೆ ಕೈಗೊಂಡಿದ್ದಾರೆ.
