ಬಂಟ್ಸ್ ಹಾಸ್ಟೇಲ್‌ನಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ 105 ನೇ ವಾರ್ಷಿಕ ಸರ್ವಸದಸ್ಯರ ಸಭೆ

ಮಂಗಳೂರು: ಬಂಟ ಸಮಾಜವನ್ನು ಕೇಂದ್ರ ಸರಕಾರವು ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ, ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟ ಸಮಾಜವನ್ನು ಪ್ರವರ್ಗ 2(ಎ) ಯಲ್ಲಿ ಸೇರಲು ಅರ್ಹವಾಗಿದ್ದರೂ ಬಂಟ ಸಮುದಾಯವನ್ನು ಪ್ರವರ್ಗ 3(ಬಿ) ಯಲ್ಲಿ ಸೇರಿಸಿರುವ ಕಾರಣ ಬಂಟರು ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತವಾಗಿ ಬಂಟ ಸಮುದಾಯಕ್ಕೆ ತುಂಬಾ ಹಿನ್ನಡೆಯಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.

ಬಂಟ್ಸ್ ಹಾಸ್ಟೇಲ್ ಬಳಿ ಇರುವ ಶ್ರೀಮತಿ ಎಸ್ ಎಮ್ ಶೆಟ್ಟಿ ಸಭಾಂಗಣದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಇದರ 105 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2024-25 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿದ ಅಜಿತ್ ಕುಮಾರ್ ರೈ ಮಾಲಾಡಿ ಬಂಟ ಸಮಾಜವನ್ನು ಕೇಂದ್ರ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಹಾಗೂ ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟರನ್ನು ಪ್ರವರ್ಗ 3 (ಬಿ) ಯಿಂದ ಪ್ರವರ್ಗ 2 (ಎ) ಸೇರ್ಪಡೆಗೊಳಿಸಲು ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ಮೀಸಲಾತಿಯಲ್ಲಿ ಸೇರಿಸುವ ಉದ್ದೇಶದಿಂದ ಹಾಗೂ ಬಂಟ ಸಮಾಜದ ನಿಜವಾದ ಸ್ಥಿತಿಗತಿಯನ್ನು ಸರಕಾರದ ಗಮನಕ್ಕೆ ಬರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ “ಬಾಂಧವ್ಯ” ಎಂಬ ನಾಮಾಂಕಿತದೊಂದಿಗೆ ವಿಶ್ವವ್ಯಾಪಿಯಾಗಿ ನೆಲೆಸಿರುವ ಬಂಟರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ವೈವಾಹಿಕ, ಆರೋಗ್ಯ, ವಸತಿ, ಧಾರ್ಮಿಕ ಮತ್ತು ಒಟ್ಟು ಜೀವನದ ವ್ಯವಸ್ಥೆ ಹಾಗೂ ಇತರ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಮಹೋನ್ನತವಾದ ದೂರಗಾಮಿ ಪರಿಣಾಮವನ್ನು ಬೀರುವ “ವಿಶ್ವ ಬಂಟರ ಮಾಹಿತಿ ಕೋಶ” ವನ್ನು ತಯಾರು ಮಾಡುವ ಒಂದು ಅನುಕರಣೀಯ ಶ್ರೇಷ್ಠ ಕೆಲಸವನ್ನು ಮಾಡಲು ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.

ಸಾಮಾಜಿಕ ಜಾಲತಾಣದ ಮೂಲಕ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ವಿಶ್ವ ಬಂಟರ ಮಾಹಿತಿಕೋಶ ಪೂರ್ಣವಾದ ನಂತರ ನಾವು ನಮ್ಮ ಸಮಾಜ ಬಾಂಧವರ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆಯುವ ಅವಕಾಶ ಒದಗಿ ಬರುತ್ತದೆ ಎಂದರು.

118 ವರ್ಷಗಳ ಹಿಂದೆ ಹಿರಿಯರ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಬಂಟರ ಮಾತೃ ಸಂಘ ಸ್ಥಾಪನೆಯಾಗಿದೆ. ಅಂದು ಯಾವುದೇ ವಾಹನಗಳ ಸೌಕರ್ಯ ಇಲ್ಲದಂತಹ ಸಂದರ್ಭದಲ್ಲಿ ಕಾಸರಗೋಡಿನಿಂದ ಬೈಂದೂರುವರೆಗಿನ ಬಂಟರನ್ನು ಹಿರಿಯರು ಒಂದುಗೂಡಿಸಿದ್ದರು. ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಲು ಬಾಡಿಗೆಯಲ್ಲಿ ವಿದ್ಯಾನಿಲಯ ಸ್ಥಾಪಿಸಿದರು. . ಪರಿವರ್ತನೆ ಜಗದ ನಿಯಮ, ಕಾಲಕ್ಕನುಗುಣವಾಗಿ ಪರಿಸ್ಥಿತಿ ಬದಲಾಯಿತು. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಯಿತು ಎಂದರು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಸಭೆಯಲ್ಲಿ 2023-24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯ ನಡಾವಳಿಗಳ ಮತ್ತು 2024-25 ನೇ ಸಾಲಿನ ವಾರ್ಷಿಕ ವರದಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಕೆ ಎಂ ಶೆಟ್ಟಿ ಮಂಡಿಸಿದರು. 2024-25 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಕೋಶಾಧಿಕಾರಿ ಸಿ ಎ ರಾಮ್ ಮೋಹನ್ ರೈ ಸಬವೆಯಲ್ಲಿ ಮಂಡಿಸಿದರು. ವಿದ್ಯಾರ್ಥಿ, ವಿದ್ಯಾರ್ಥಿನಿ ಭವನಗಳ, ಶಾಲಾ ಕಾಲೇಜುಗಳ, ತಾಲೂಕು ಸಮಿತಿಗಳ ವಾರ್ಷಿಕ ವರದಿ ಮಂಡನೆ ನಡೆಯಿತು.

2025-26 ನೇ ಸಾಲಿಗೆ ಲೆಕ್ಕ ಪರಿಶೋಧಕರಾಗಿ ಸಿ ಎ ದಯಾಚರಣ್ ಶೆಟ್ಟಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ ಉಪಸ್ಥಿತರಿದ್ದರು.

ಕಾವು ಹೇಮನಾಥ ಶೆಟ್ಟಿ ವಂದಿಸಿದರು. ಡಾ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!