ಬೆಂಗಳೂರು: ಇವತ್ತು ಬೆಳಗ್ಗೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ನಡೆದ ಹೈವೋಲ್ಟೇಜ್ ಬ್ರೇಕ್‌ಫಾಸ್ಟ್ ಮೀಟಿಂಗ್ ಮುಗಿಸಿ ಹೊರಬಂದ ಸಚಿವ ಸಂತೋಷ್ ಲಾಡ್ ಕಣ್ಣೀರು ಹಾಕಿದ ಪ್ರಸಂಗ ಇಡೀ ಮೀಡಿಯಾ ಮಂದಿಯ ಅಚ್ಚರಿಗೆ ಕಾರಣವಾಗಿದೆ.


ಬ್ರೇಕ್‌ಫಾಸ್ಟ್ ಮುಗಿಸಿ ಎಲ್ಲಾ ಸಚಿವರು ಕಾರು ಹತ್ತಿ ವಾಪಸ್ ಹೊರಡುತ್ತಿದ್ದರು. ಅಷ್ಟರಲ್ಲಿ ಮಾಧ್ಯಮ ಪ್ರತಿನಿಧಿಗಳು ಸಚಿವ ಸಂತೋಷ್ ಲಾಡ್ ಅವರ ಕಾರಿಗೆ ಮುತ್ತಿಗೆ ಹಾಕಿ, “ಸರ್, ಸಿಎಂ ಸಿದ್ದರಾಮಯ್ಯನವರು ನಿಜವಾಗ್ಲೂ ರಾಜೀನಾಮೆ ಕೊಡ್ತಾರಾ?” ಎಂದು ಪ್ರಶ್ನಿಸಿದ್ದಾರೆ.. ಅಷ್ಟೇ! ಆ ಪ್ರಶ್ನೆ ಕೇಳಿದ್ದೇ ತಡ, ಸಂತೋಷ್ ಲಾಡ್ ಅವರಿಗೆ ದುಃಖ ಉಕ್ಕಿ ಬಂದುಬಿಟ್ಟಿದೆ. ಬಿಕ್ಕಿ ಬಿಕ್ಕಿ ಅಳುತ್ತಾ, ಕಾರಿನ ಸೀಟಿನಲ್ಲೇ ಕುಳಿತು ಕಣ್ಣೀರಿನ ಕೋಡಿಯನ್ನೇ ಹರಿಸಿದ್ದಾರೆ!

ಒಬ್ಬ ಸಚಿವರು ಈ ರೇಂಜ್‌ಗೆ ಭಾವುಕರಾಗಿ ಕಣ್ಣೀರು ಹಾಕಿದ್ದನ್ನು ನೋಡಿ ಅಲ್ಲಿದ್ದ ಕ್ಯಾಮೆರಾಮನ್‌ಗಳು ಒಂದು ಕ್ಷಣ ಶಾಕ್ ಆದರು. “ಮಧ್ಯಾಹ್ನ ೩ ಗಂಟೆಗೆ ಸಿಎಂ ರಾಜೀನಾಮೆ ಕೊಡ್ತಾರೆ…” ಎಂದಷ್ಟೇ ಹೇಳಲು ಸಾಧ್ಯವಾದ ಲಾಡ್ ಅಲ್ಲಿಂದ ಬಿಕ್ಕಿ ಬಿಕ್ಕಿ ಅಳುತ್ತಾ ತೆರಳಿದ್ದಾರೆ. ಇದರಿಂದ ಬೆಚ್ಚಿಬಿದ್ದ ಮೀಡಿಯಾಮಂದಿ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ. ಸಿದ್ದರಾಮಯ್ಯ ಸೀಟು ಬಿಟ್ಟರೆ ಇವರಿಗ್ಯಾಕೆ ಕಣ್ಣೀರು ಅಂತ ಪತ್ರಕರ್ತರು ಮುಖ ಮುಖ ನೋಡಿಕೊಂಡಿದ್ದಾರೆ.
