
ಬೆಂಗಳೂರು: ಕಾಂಗ್ರೆಸ್ ನ ಮೂರು ರಾಜ್ಯಸಭಾ ಸ್ಥಾನಗಳು ಮುಂದಿನ ತಿಂಗಳು ತೆರವಾಗಲಿದ್ದು, ಈ ಪೈಕಿ ಒಂದು ಸ್ಥಾನ ಮತ್ತೊಮ್ಮೆ ಕಾಂಗ್ರೆಸ್‌ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಗಲಿದೆ ಎಂಬುದು ಗ್ಯಾರಂಟಿಯಾಗಿದೆ. ಒಂದು ಸ್ಥಾನ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಈ ಬಾರಿ ಮೀಸಲಿರಿಸುವ ಸಂಭವ ಹೆಚ್ಚಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಕಳೆದ ಬಾರಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಒಂದು ರಾಜ್ಯಸಭಾ ಸದಸ್ಯ ಸ್ಥಾನ ಒಲಿದು ಬಂದಿತ್ತು. ಈ ಬಾರಿ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಒಲಿದು ಬರಲಿದೆ ಎನ್ನಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕ್ರಿಶ್ಚಿಯನ್ ಸಂಖ್ಯೆಯಲ್ಲಿರುವ ದಕ್ಷಿಣ ಕನ್ನಡದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಈ ಹುದ್ದೆ ಸಿಗಬಹುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದೆ.

ಈ ಪೈಕಿ ಕಾಂಗ್ರೆಸ್‌ನ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿರುವ ಹಾಗೂ ಹಿರಿಯ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿರುವ ನವೀನ್ ಡಿಸೋಜಾ ರವರ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ. ಈ ಬಾರಿಯ ಕೇರಳದ ಚುನಾವಣೆಯಲ್ಲಿ ಸಹ ನವೀನ್ ಡಿಸೋಜ ಕಾರ್ಯನಿರ್ವಹಣೆ ಪಕ್ಷದ ಹೈಕಮಾಂಡ್ ಗಮನ ಸೆಳೆದಿದ್ದು, ಈ ಮೊದಲು ತನಗೆ ನೀಡಿರುವ ಹಲವಾರು ಜವಾಬ್ದಾರಿಗಳನ್ನು ಎಲ್ಲಿಯೂ ಪ್ರಚಾರ ಬಯಸದೆ ಚಾಚು ತಪ್ಪದೇ ನಿರ್ವಹಿಸಿದ ಕೀರ್ತಿ ನವೀನ್ ಡಿಸೋಜ ರವರಿಗೆ ಇದೆ. ಈ ಎಲ್ಲಾ ಅಂಶಗಳ ಆಧಾರದ ಮೇಲೆ ಈ ಬಾರಿ ಅವರನ್ನು ರಾಜ್ಯಸಭೆ ಕಳಿಸುವ ಬಗ್ಗೆ ಪಕ್ಷದ ಉನ್ನತ ಮೂಲಗಳು ಗಂಭೀರ ಚಿಂತನೆಯಲ್ಲಿದೆ ಎಂದು ತಿಳಿದು ಬಂದಿದೆ.

ಇನ್ನೊಂದು ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ. ಕಾಂಗ್ರೆಸ್ ತನ್ನ ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಸುಲಭವಾಗಿ ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕಾಂಗ್ರೆಸ್‌ನ ಶಾಸಕರಗಳ ಬಲ 3 ರಾಜ್ಯಸಭೆಗೆ ಆಯ್ಕೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ರಾಜ್ಯಸಭಾ ಚುನಾವಣೆ ಜೂನ್ 18ರಂದು ನಡೆಯಲಿದ್ದು, ಜೂನ್ ಎಂಟಕ್ಕೆ ನಾಮಿನೇಷನ್ ಸಲ್ಲಿಸಲು ಅಂತಿಮ ದಿನಾಂಕವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ.