ಮಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ಕ್ರೀಡಾಂಗಣದ ಅನುಭವವನ್ನು ನೀಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಬಿಸಿಸಿಐ ವತಿಯಿಂದ ʻಟಾಟಾ ಐಪಿಎಲ್ ಫ್ಯಾನ್ ಪಾರ್ಕ್’ (TATA IPL Fan Park) ಆಯೋಜಿಸಲಾಗಿದೆ ಎಂದು ಬಿಸಿಸಿಐ ಪ್ರತಿನಿಧಿ ವಿಕಾಸ್ ಪಂಡಿತ್ ತಿಳಿಸಿದ್ದಾರೆ.


ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಐಪಿಎಲ್ ಪ್ಲೇ-ಆಫ್ಸ್ ಮತ್ತು ಫೈನಲ್ ಪಂದ್ಯಗಳ ರೋಚಕತೆಯನ್ನು ಕರಾವಳಿಯ ಜನತೆಗೆ ಉಚಿತವಾಗಿ ತಲುಪಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಲಾಲ್‌ಬಾಗ್‌ನಲ್ಲಿರುವ ‘ಕರಾವಳಿ ಉತ್ಸವ ಮೈದಾನ’ದಲ್ಲಿ (ಮಾರ್ಟಿನ್ ಪಾಯ್ಸ್ ರಸ್ತೆ) ಈ ಫ್ಯಾನ್ ಪಾರ್ಕ್ ನಿರ್ಮಾಣವಾಗಲಿದೆ. ಮೇ 29 ರಂದು ನಡೆಯಲಿರುವ ಪ್ಲೇ-ಆಫ್ಸ್ ಪಂದ್ಯ ಹಾಗೂ ಮೇ 31 ರಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯವನ್ನು ಬೃಹತ್ ಪರದೆಗಳ (Mega Screen) ಮೂಲಕ ನೇರ ಪ್ರಸಾರ ಮಾಡಲಾಗುವುದು. ಎರಡೂ ದಿನಗಳೂ ಸಂಜೆ 5.30 ರಿಂದ ಸಾರ್ವಜನಿಕರಿಗೆ ಮೈದಾನದೊಳಗೆ ಪ್ರವೇಶ ಮುಕ್ತವಾಗಿರುತ್ತದೆ ಎಂದವರು ತಿಳಿಸಿದರು.

ದೇಶದ 50 ಪ್ರಮುಖ ನಗರಗಳಲ್ಲಿ ಈ ಫ್ಯಾನ್ ಪಾರ್ಕ್‌ಗಳನ್ನು ಆಯೋಜಿಸಲಾಗುತ್ತಿದ್ದು, ಮಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಇದರ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ. ಪಂದ್ಯದ ನೇರ ಪ್ರಸಾರದ ಜೊತೆಗೆ ಮೈದಾನದಲ್ಲಿ ಸಂಗೀತ, ಅಧಿಕೃತ ಪ್ರಾಯೋಜಕರಿಂದ ಮೋಜಿನ ಆಟಗಳು, ವಿವಿಧ ಆಹಾರ ಮಳಿಗೆಗಳು (Food Stalls), ಪಾನೀಯಗಳು ಮತ್ತು ಐಪಿಎಲ್ ಮರ್ಚಂಡೈಸ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಪ್ರತಿಯೊಬ್ಬ ಅಭಿಮಾನಿಗೂ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ವೀಕ್ಷಿಸಿದಂತಹ ಲೈವ್ ಅನುಭವ ಸಿಗಲಿದೆ ಎಂದು ವಿಕಾಸ್ ಪಂಡಿತ್ ವಿವರಿಸಿದರು.

ಹತ್ತು ಲಕ್ಷಕ್ಕೂ ಅಧಿಕ ಅಭಿಮಾನಿಗಳ ನಿರೀಕ್ಷೆ:
ಪ್ರತಿ ಸೀಸನ್‌ಗಿಂತಲೂ ಈ ಬಾರಿ ಐಪಿಎಲ್ ಫ್ಯಾನ್ ಪಾರ್ಕ್‌ಗಳ ಕ್ರೇಜ್ ಹೆಚ್ಚಾಗಿದ್ದು, ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಕ್ರಿಕೆಟ್ ಪ್ರೇಮಿಗಳು ಈ ಮೋಜಿನ ಅನುಭವವನ್ನು ಪಡೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕರಾವಳಿಯ ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಉತ್ಸವ ಮೈದಾನಕ್ಕೆ ಭೇಟಿ ನೀಡಿ, ತಮ್ಮ ನೆಚ್ಚಿನ ತಂಡ ಮತ್ತು ಆಟಗಾರರನ್ನು ಬೆಂಬಲಿಸುವ ಮೂಲಕ ಈ ಕ್ರಿಕೆಟ್ ಹಬ್ಬವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಜೆರ್ಸಿ ಬಿಡುಗಡೆಗೊಳಿಸಲಾಯಿತು. ಮಂಗಳೂರಿನ ಮಾಜಿ ಮೇಯರ್ ಮಹಾಬಲ ಮಾರ್ಲ ಅವರು ಉಪಸ್ಥಿತರಿದ್ದರು.