ಜೆರುಸಲೆಮ್: “ಮಧ್ಯಪ್ರಾಚ್ಯದಲ್ಲಿ ಇನ್ನುಮುಂದೆ ಯುದ್ಧದ ದಿಕ್ಕನ್ನು ನಿರ್ಧರಿಸುವುದು ಗಡಿರೇಖೆಯ ಸೈನಿಕರಲ್ಲ, ಬದಲಿಗೆ ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಬಿಗ್ ಟೆಕ್ ಉದ್ಯಮಗಳು!”

ಇಡೀ ಜಗತ್ತೇ ಬೆರಗಾಗುವಂತಹ ಇಂತಹದೊಂದು ಸ್ಫೋಟಕ ಸತ್ಯವನ್ನು ಇಸ್ರೇಲ್ ಸರ್ಕಾರದ ಉನ್ನತ ಅಧಿಕಾರಿಗಳು ಬಿಚ್ಚಿಟ್ಟಿದ್ದಾರೆ. ಭಾರತದ ಸುದ್ದಿ ಸಂಸ್ಥೆ ʻNDTV’ ಜೊತೆ ಜಂಟಿ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಇಸ್ರೇಲ್ ಅಧಿಕಾರಿಗಳು, ಇರಾನ್‌ನ ಕುಖ್ಯಾತ ʻಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವಂತೆ ಭಾರತಕ್ಕೆ ಅಧಿಕೃತವಾಗಿ ಮನವಿ ಮಾಡಿದ್ದಾರೆ.

ಭಾರತ, ಮಧ್ಯಪ್ರಾಚ್ಯ ಮತ್ತು ಯೂರೋಪ್ ಅನ್ನು ಜೋಡಿಸುವ ಆರ್ಥಿಕ ಕಾರಿಡಾರ್ (IMEC) ಹಾಗೂ ‘I2U2’ ಒಕ್ಕೂಟಗಳನ್ನು ಇಸ್ರೇಲ್ ಈಗ ಸಂಪೂರ್ಣ ಹೊಸ ದೃಷ್ಟಿಕೋನದಿಂದ ನೋಡುತ್ತಿದೆ. ಭವಿಷ್ಯದ ಕಾರ್ಯತಂತ್ರಗಳು ಕೇವಲ ರೈಲ್ವೆ ಲೈನ್‌ಗಳು, ಬಂದರುಗಳು ಅಥವಾ ಹಡಗು ಮಾರ್ಗಗಳ ಮೇಲೆ ನಿಂತಿರುವುದಿಲ್ಲ. ಬದಲಿಗೆ ಯಾರು ಕೃತಕ ಬುದ್ಧಿಮತ್ತೆ (AI), ಕಮ್ಯುನಿಕೇಶನ್ ಸಿಸ್ಟಮ್ ಮತ್ತು ಸೆಮಿಕಂಡಕ್ಟರ್‌ಗಳ (ಚಿಪ್ಸ್) ಮೇಲೆ ನಿಯಂತ್ರಣ ಸಾಧಿಸುತ್ತಾರೋ ಅವರದೇ ಜಗತ್ತು ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. “ಇನ್ಮುಂದೆ ಯುದ್ಧಭೂಮಿಯಲ್ಲಿ ಸೈನಿಕರಿಗಿಂತ ಸೂಪರ್ ಟೆಕ್ನಾಲಜಿಗಳೇ ಸಾಮ್ರಾಜ್ಯವನ್ನು ನಿರ್ಧರಿಸಲಿವೆ” ಎಂದು ಹಿರಿಯ ಅಧಿಕಾರಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಭಾರತಕ್ಕೆ ಇಸ್ರೇಲ್ ಇಟ್ಟಿರುವ ಡಿಮ್ಯಾಂಡ್ ಏನು?
ವಿಶ್ವದ ದೊಡ್ಡಣ್ಣ ಅಮೆರಿಕ ಸೇರಿದಂತೆ ಈಗಾಗಲೇ 44 ದೇಶಗಳು ಇರಾನ್‌ನ ಐಆರ್‌ಜಿಸಿ (IRGC) ವಿರುದ್ಧ ಕಠಿಣ ಕ್ರಮ ಕೈಗೊಂಡಿವೆ. ಆಸ್ಟ್ರೇಲಿಯಾ ಮತ್ತು ಯೂರೋಪಿಯನ್ ಯೂನಿಯನ್ ಕೂಡ ಇದನ್ನು ಉಗ್ರಗಾಮಿ ಸಂಘಟನೆ ಎಂದು ಘೋಷಿಸಲು ಮುಂದಾಗಿವೆ. ಇದೇ ಹಾದಿಯಲ್ಲಿ ಭಾರತ ಕೂಡ ಇರಾನ್‌ನ ಐಆರ್‌ಜಿಸಿ ಹಾಗೂ ಅಕ್ಟೋಬರ್ 7ರಂದು ದಾಳಿ ನಡೆಸಿದ ʻಹಮಾಸ್’ ಸಂಘಟನೆಯನ್ನು ಅಧಿಕೃತವಾಗಿ ʻಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಬೇಕು ಎಂದು ಇಸ್ರೇಲ್ ವಿನಂತಿಸಿದೆ. ಇರಾನ್‌ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿ “ಭಾರತ ನಮಗೆ ನಂಬಿಕಸ್ಥ ಗೆಳೆಯ” ಎಂದು ಹೇಳಿದ್ದ ಬೆನ್ನಲ್ಲೇ, ಇಸ್ರೇಲ್ ಭಾರತದ ಮೇಲೆ ಈ ರಾಜತಾಂತ್ರಿಕ ಒತ್ತಡ ಹೇರಿರುವುದು ಜಾಗತಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇರಾನ್ ಸರ್ಕಾರ ಉರುಳಿಸುವುದಲ್ಲ, ಅವರ ಬೆನ್ನೆಲುಬು ಮುರಿಯುವುದೇ ಪ್ಲಾನ್!
ಇದೇ ವೇಳೆ ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಅಸಲಿ ರಹಸ್ಯವನ್ನೂ ಇಸ್ರೇಲ್ ಬಹಿರಂಗಪಡಿಸಿದೆ. ಇರಾನ್‌ನಲ್ಲಿ ಆಡಳಿತ ಬದಲಾವಣೆ ಮಾಡುವುದು ಇಸ್ರೇಲ್ ಉದ್ದೇಶವಲ್ಲ. ಬದಲಿಗೆ ಇರಾನ್‌ನ ಕ್ಷಿಪಣಿ ತಯಾರಿಕಾ ಕೈಗಾರಿಕಾ ಘಟಕಗಳನ್ನೇ ಧ್ವಂಸಗೊಳಿಸಿ, ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು (Air Defence) ಮೀರಿ ನಿಲ್ಲುವ ಅವರ ತಾಕತ್ತನ್ನು ಸಂಪೂರ್ಣವಾಗಿ ನಾಶಪಡಿಸುವುದೇ ಇಸ್ರೇಲ್ ತಂತ್ರವಾಗಿದೆ. ಇದಕ್ಕಾಗಿಯೇ ಉಗ್ರರ ನಾಯಕರನ್ನು ಸತತವಾಗಿ ಟಾರ್ಗೆಟ್ ಮಾಡಲಾಗುತ್ತಿದ್ದು, ಅವರು ಪ್ರಾಣ ಉಳಿಸಿಕೊಳ್ಳಲು ಅಡಗಿಕೊಳ್ಳುವಂತೆ ಮಾಡುವುದರಿಂದ ಅವರ ಕಾರ್ಯಾಚರಣೆಯ ಸಾಮರ್ಥ್ಯ ಶೇ. 80 ರಷ್ಟು ಕುಸಿಯುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
