
ಸುರತ್ಕಲ್‌ನಲ್ಲಿ ಭರ್ಜರಿ ಪೊಲೀಸ್ ಬೇಟೆ:
ಅಕ್ರಮವಾಗಿ ನೆಲೆಸಿದ್ದ 8 ಮಂದಿ ಬಂಧನ!
ಮಂಗಳೂರು: ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್‌ನಲ್ಲಿ ಯಾವುದೇ ಅಧಿಕೃತ ರಹದಾರಿ ಪತ್ರ ಹಾಗೂ ವೀಸಾ ಇಲ್ಲದೆ ಅಕ್ರಮವಾಗಿ ನೆಲೆಸಿದ್ದ ಎಂಟು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರಲ್ಲಿ ವಿದೇಶಿ ಪ್ರಜೆಗಳು ಅಕ್ರಮವಾಗಿ ವಾಸವಿರುವ ಬಗ್ಗೆ ಪೊಲೀಸರಿಗೆ ಪಕ್ಕಾ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಜುಲೈ 9ರಂದು ಪೊಲೀಸರ ತಂಡವು ಕಟ್ಟಡದ ಮೇಲೆ ದಿಢೀರ್ ದಾಳಿ ನಡೆಸಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 54 ಮಂದಿ ಕಾರ್ಮಿಕರ ದಾಖಲಾತಿಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದಾಗ, ಇವರ ಪೈಕಿ ಎಂಟು ಜನ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದಿರುವುದು ಪತ್ತೆಯಾಗಿದೆ.
ಬಂಧಿತರೆಲ್ಲರೂ ಬಾಂಗ್ಲಾದೇಶದ ರಾಜ್‌ಶಾಹಿ ವಿಭಾಗದ ಗೊಡಾಗರಿ ಉಪಜಿಲ್ಲೆಯ ನಿವಾಸಿಗಳಾಗಿದ್ದಾರೆ. ಮೊಹಮ್ಮದ್ ಮುಕ್ತಾರ್ ಅಲಿ (36), ಮೊಹಮ್ಮದ್ ರಕೀಬುರ್ ಹೊಸೈನ್ (44), ಮೊಹಮ್ಮದ್ ಅಜರುಲ್ ಇಸ್ಲಾಂ (36), ಮೊಹಮ್ಮದ್ ಜಾಹಿದ್ ಹೊಸೈನ್ (18), ಮೊಹಮ್ಮದ್ ಬೇಲಾಲ್ ಹೊಸೈನ್ (36), ಮೊಹಮ್ಮದ್ ಹಸಿಬುಲ್ ಹಸನ್ ಶಾಂಟೋ (37), ಮೊಹಮ್ಮದ್ ಸಮೇವುಲ್ ಹಸನ್ (23) ಹಾಗೂ ಮೊಹಮ್ಮದ್ ಸೈಬುರ್ ರೆಹಮಾನ್ ಬಂಧಿತ ಆರೋಪಿಗಳು.
ವಿಚಾರಣೆಯ ವೇಳೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಈ ಆರೋಪಿಗಳು ಸುಮಾರು ಮೂರು ತಿಂಗಳ ಹಿಂದೆ ಭಾರತ-ಬಾಂಗ್ಲಾ ಗಡಿ ದಾಟಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಭಾರತದೊಳಗೆ ನುಸುಳಿದ್ದರು. ಬಳಿಕ ಅಲ್ಲಿನ ಸ್ಥಳೀಯ ವಿಳಾಸ ಹೊಂದಿದ್ದ ಒರಿಜಿನಲ್ ಆಧಾರ್ ಕಾರ್ಡ್‌ಗಳಿಗೆ ತಮ್ಮ ಭಾವಚಿತ್ರಗಳನ್ನು ಅಂಟಿಸಿ, ಕಲರ್ ಜೆರಾಕ್ಸ್ ಮಾಡುವ ಮೂಲಕ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿದ್ದರು. ಕಳೆದ ಎರಡು ತಿಂಗಳಿನಿಂದ ಮುಕ್ಕ ಭಾಗದಲ್ಲಿ ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಕೆಲಸ ಮಾಡುತ್ತಾ ವಾಸವಿದ್ದರು ಎಂದು ತಿಳಿದುಬಂದಿದೆ.
ಸಂಶಯದ ಮೇರೆಗೆ ಇವರನ್ನು ಠಾಣೆಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇವರ ಬಳಿಯಿದ್ದ ಬಾಂಗ್ಲಾದೇಶದ ‘ನ್ಯಾಷನಲ್ ಐಡಿ ಕಾರ್ಡ್, ಜನನ ಪ್ರಮಾಣ ಪತ್ರ ಹಾಗೂ ಇವರ ಕುಟುಂಬದ ಇತರ ದಾಖಲೆಗಳು ಪತ್ತೆಯಾಗಿವೆ. ಇವುಗಳನ್ನು ಪರಿಶೀಲಿಸಿದಾಗ ಇವರು ಮೂಲತಃ ಬಾಂಗ್ಲಾದೇಶದವರೇ ಆಗಿದ್ದು, ಇಲ್ಲಿಗೆ ಕೂಲಿ ಕೆಲಸಕ್ಕಾಗಿ ಬಂದಿರುವುದು ದೃಢಪಟ್ಟಿದೆ. ಸದ್ಯ ಇವರ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲು ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಈಖಖಔ) ವರದಿಯನ್ನು ಸಲ್ಲಿಸಲಾಗಿದೆ.

ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ್ ಅವರ ನೇತೃತ್ವದಲ್ಲಿ, ಸುರತ್ಕಲ್ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್, ಪಿಎಸ್‌ಐ ರಘು ನಾಯಕ ಹಾಗೂ ಸಿಬ್ಬಂದಿ ಎಎಸ್‌ಐ ರಾಜೇಶ್ ಆಳ್ವ, ತಿರುಪತಿ ಅಳ್ಳೊಳ್ಳಿ, ಉಮೇಶ್, ರಾಜೇಂದ್ರ ಪ್ರಸಾದ್, ಕಾರ್ತಿಕ್, ವಿನೋದ್ ಕುಮಾರ್, ಸತೀಶ್ ಸತ್ತಿಗೇರಿ, ಸಂತೋಷ್ ಮತ್ತು ಓಂಪ್ರಕಾಶ್ ಬಿಂಗಿ ಅವರು ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ದಿನನಿತ್ಯ ನೂರಾರು ಕಾರ್ಮಿಕರು ಬಂದು ಹೋಗುವ ಕರಾವಳಿ ಭಾಗದಲ್ಲಿ ಪೊಲೀಸರ ಈ ಸಮಯಪ್ರಜ್ಞೆಯ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
