ಡಬಲ್ ಡೆಕ್ಕರ್ ಬಸ್ ಪಲ್ಟಿ; 6 ಮಂದಿ ಸಾ*ವು, 21 ಮಂದಿಗೆ ಗಾಯ

ಲಕ್ನೋ: ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಡಬಲ್ ಡೆಕ್ಕರ್ ಎಸಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿರುವ ಘಟನೆ ಇಂದು(ಮೇ 26) ಬೆಳಗಿನ ಜಾವ ಸುಮಾರು 5:15ರ ವೇಳೆಗೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ ವೇಯಲ್ಲಿ ಸಂಭವಿಸಿದೆ.

ಬಸ್ ಅತಿವೇಗದಲ್ಲಿ ಸಂಚರಿಸುತ್ತಿದ್ದು, ಈ ವೇಳೆ ಚಾಲಕ ನಿದ್ರೆಗೆ ಜಾರಿದ್ದಾನೆ. ಪರಿಣಾಮ ಬಸ್ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕೆಲ ಪ್ರಯಾಣಿಕರು ಕಿಟಕಿಗಳ ಮೂಲಕ ಹೊರಗೆ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಸ್‌ನಲ್ಲಿ ಸುಮಾರು 50 ಪ್ರಯಾಣಿಕರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರು ಪೊಲೀಸ್ ಸಿಬ್ಬಂದಿ ಸೇರಿ ಹಲವರನ್ನ ಲಖ್ನೋ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಮಾಹಿತಿ ತಿಳಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

error: Content is protected !!