
ಬೆಂಗಳೂರು: ವಿದೇಶಿ ಮೂಲದ ಹೈಟೆಕ್ ಮಾದಕ ವಸ್ತುಗಳ ಜಾಲವನ್ನು ಬೆಂಗಳೂರಿನಲ್ಲಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಅಮೆರಿಕ ಮತ್ತು ಥಾಯ್ಲೆಂಡ್‌ನಿಂದ ಚಾಮರಾಜಪೇಟೆಯಲ್ಲಿರುವ ವಿದೇಶಿ ಪೋಸ್ಟ್ ಆಫೀಸ್‌ಗೆ ಪಾರ್ಸೆಲ್ ಮೂಲಕ ಬಂದಿದ್ದ ಭಾರಿ ಮೌಲ್ಯದ ಮಾದಕ ವಸ್ತುವನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತಿಂಡಿ ತಿನಿಸುಗಳ ‘ಸ್ನಾಕ್ಸ್ ಬಾಕ್ಸ್’ ಒಳಗಡೆ ಮುಚ್ಚಿಟ್ಟಿದ್ದಂತಹ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 312 ಗ್ರಾಂ ಹೈಡ್ರೋ ಗಾಂಜಾವನ್ನು ಜಪ್ತಿ ಮಾಡಲಾಗಿದೆ.

ವಿದೇಶಿ ಪೋಸ್ಟ್ ಆಫೀಸ್‌ನಲ್ಲಿದ್ದ ಕೆಲವು ಪಾರ್ಸೆಲ್‌ಗಳ ಮೇಲೆ ಅನುಮಾನಗೊಂಡ ಅಂಚೆ ಕಚೇರಿ ಸಿಬ್ಬಂದಿ ತಕ್ಷಣವೇ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಸಿಬಿ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳು ಪಾರ್ಸೆಲ್ ಓಪನ್ ಮಾಡಿದಾಗ ಹೈಡ್ರೋ ಗಾಂಜಾ ಪತ್ತೆಯಾಗಿದೆ.

ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಾಗಿಸುತ್ತಿದ್ದ 5 ಕೋಟಿ ರೂಪಾಯಿ ಮೌಲ್ಯದ ಹೈಡ್ರೋ ಗಾಂಜಾ ಮತ್ತು ಎಂಡಿಎಂಎ ಕ್ರಿಸ್ಟಲ್‌ಗಳನ್ನು ಜಪ್ತಿ ಮಾಡಿ ಪೆಡ್ಲರ್‌ಗಳನ್ನು ವಶಕ್ಕೆ ಪಡಿದುಕೊಳ್ಳಲಾಗಿತ್ತು.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಪಾರ್ಸೆಲ್ ಯಾರ ಹೆಸರಿಗೆ ಬುಕ್ ಆಗಿತ್ತು ಮತ್ತು ಬೆಂಗಳೂರಿನಲ್ಲಿ ಇದರ ಅಂತಿಮ ರಿಸೀವರ್ಸ್ ಯಾರು ಎಂಬ ಜಾಲದ ಜಾಡು ಹಿಡಿದು ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.