ಮಂಗಳೂರು: ʻಕಾಂತಾರ’ ಚಲನಚಿತ್ರದ ಪವಿತ್ರ ದೈವಾರಾಧನೆಯನ್ನು ʻಹೆಣ್ಣು ದೆವ್ವ’ ಎಂದು ಕರೆದು ಅಪಹಾಸ್ಯ ಮಾಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್, ಹೈಕೋರ್ಟ್ ಆದೇಶದ ಬೆನ್ನಲ್ಲೇ ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ರಹಸ್ಯವಾಗಿ ಕ್ಷಮೆ ಕೇಳಿದ್ದಾರೆ. ಆದರೆ, ರಣವೀರ್ ಸಿಂಗ್ ಅವರ ಈ ನಡೆಗೆ ಕರಾವಳಿ ಭಾಗದ ದೈವಭಕ್ತರು ಮತ್ತು ಸಾಂಸ್ಕೃತಿಕ ಚಿಂತಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಅಪಚಾರ ಎಸಗಿರುವುದು ತುಳುನಾಡಿನ ದೈವಗಳಿಗೆ, ಹಾಗಾಗಿ ಕರಾವಳಿಯ ದೈವದ ಸನ್ನಿಧಿಯಲ್ಲೇ ಬಂದು ಕ್ಷಮೆಯಾಚಿಸಬೇಕು” ಎಂದು ಪಟ್ಟು ಹಿಡಿದಿದ್ದಾರೆ.

ಹೈಕೋರ್ಟ್ ಸೂಚನೆಯಂತೆ ರಣವೀರ್ ಸಿಂಗ್ ಮೈಸೂರಿನಲ್ಲಿ ದೇವಿಯ ದರ್ಶನ ಪಡೆದು ತಲೆಬಾಗಿದ್ದಾರಾದರೂ, ಕರಾವಳಿಯ ಜನರಲ್ಲಿರುವ ಆಕ್ರೋಶದ ಕಿಡಿ ಮಾತ್ರ ಆರಿಲ್ಲ. “ತುಳುನಾಡು ಎಂಬುದು ಪರಶುರಾಮ ಸೃಷ್ಟಿಯ ಪವಿತ್ರ ನಡೆ. ಇಲ್ಲಿನ ದೈವಾರಾಧನೆ ಎಂಬುದು ಕೇವಲ ಕಲೆಯಲ್ಲ, ಅದು ಕೋಟ್ಯಂತರ ಜನರ ಜೀವಂತ ನಂಬಿಕೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ರಿಷಬ್ ಶೆಟ್ಟಿ ದೈವವನ್ನು ಅಣಕವಾಡಿ, ಇಡೀ ಆರಾಧನಾ ಪದ್ಧತಿಗೆ ಅಪಚಾರ ಎಸಗಿದ ನಟ, ಮೈಸೂರಿನಲ್ಲಿ ಕ್ಷಮೆ ಕೇಳಿದರೆ ಸಾಲದು. ಅವರು ಕರಾವಳಿಗೇ ಬಂದು, ಯಾವ ದೈವಕ್ಕೆ ಅಪಮಾನ ಮಾಡಿದ್ದಾರೋ ಅದೇ ದೈವದ ಸನ್ನಿಧಿಯಲ್ಲಿ, ದೈವದ ಮುಖೇನವೇ ಬೇಷರತ್ ಆಗಿ ತಪ್ಪು ಒಪ್ಪಿಕೊಳ್ಳಬೇಕು” ಎಂದು ಸಾಂಸ್ಕೃತಿಕ ಚಿಂತಕರು ಮತ್ತು ದೈವ ನರ್ತಕರು ಆಗ್ರಹಿಸಿದ್ದಾರೆ.

ಏನಿದು ವಿವಾದದ ಹಿನ್ನೆಲೆ?
ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಕಾರ್ಯಕ್ರಮದಲ್ಲಿ ನಟ ರಣವೀರ್ ಸಿಂಗ್, ರಿಷಬ್ ಶೆಟ್ಟಿ ಅವರ ʻಕಾಂತಾರ’ ಚಿತ್ರದ ದೈವ ನರ್ತನದ ದೃಶ್ಯವನ್ನು ಉಲ್ಲೇಖಿಸುವಾಗ ಅತ್ಯಂತ ಹಗುರವಾಗಿ ಮಾತನಾಡಿದ್ದರು. “ಆ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಮಜವಾಗಿತ್ತು” ಎಂದು ಹೇಳುತ್ತಾ, ದೈವದ ಧ್ವನಿ ಮತ್ತು ನೋಟವನ್ನು ವಿಚಿತ್ರವಾಗಿ ಮಿಮಿಕ್ರಿ ಮಾಡಿ ಅಪಹಾಸ್ಯ ಮಾಡಿದ್ದರು. ಇದು ಇಡೀ ತುಳುನಾಡಿನಾದ್ಯಂತ ಭಾರಿ ಜನಾಗ್ರಹಕ್ಕೆ ಕಾರಣವಾಗಿತ್ತು ಮತ್ತು ನಟನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ದೂರು ನೀಡಲಾಗಿತ್ತು.

ಕಾನೂನು ಸಂಕಷ್ಟಕ್ಕೆ ಸಿಲುಕಿದ್ದ ರಣವೀರ್ ಸಿಂಗ್, ಪ್ರಕರಣ ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ನಟನ ಪರ ವಕೀಲರು ಬೇಷರತ್ ಕ್ಷಮಾಪಣಾ ಅಫಿಡವಿಟ್ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಹೈಕೋರ್ಟ್, ನಾಲ್ಕು ವಾರಗಳ ಒಳಗಾಗಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಸನ್ನಿಧಿಯಲ್ಲಿ ಕ್ಷಮೆ ಯಾಚಿಸುವಂತೆ ಸೂಚಿಸಿತ್ತು. ಕೋರ್ಟ್ ಆದೇಶದಂತೆ ರಣವೀರ್ ಸಿಂಗ್ ಮಂಗಳವಾರ ಮುಂಜಾನೆ 7:30ರ ಸುಮಾರಿಗೆ ಯಾರಿಗೂ ತಿಳಿಯದಂತೆ ಅತ್ಯಂತ ರಹಸ್ಯವಾಗಿ ಮಾಸ್ಕ್ ಧರಿಸಿ ಬಂದು ತಾಯಿಯ ದರ್ಶನ ಪಡೆದು, ತಲೆಬಾಗಿ ಕ್ಷಮೆ ಕೇಳಿದ್ದಾರೆ.

ಮುಗಿಯದ ವಿವಾದ
ಕೋರ್ಟ್ ಕಣ್ಣಿನಲ್ಲಿ ಮೈಸೂರು ಚಾಮುಂಡೇಶ್ವರಿ ಸನ್ನಿಧಿಯ ಭೇಟಿಯೊಂದಿಗೆ ಈ ಕಾನೂನು ಪ್ರಕ್ರಿಯೆ ಮುಕ್ತಾಯದ ಹಂತ ತಲುಪರಬಹುದು. ಆದರೆ, ಕೋಟ್ಯಂತರ ದೈವಭಕ್ತರ ಮನಸ್ಸಿಗೆ ಆಗಿರುವ ಗಾಯ ಇಷ್ಟಕ್ಕೇ ಮಾಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಕರಾವಳಿಯ ಭಕ್ತರ ಈ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ, ನಟ ರಣವೀರ್ ಸಿಂಗ್ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯ ಯಾವುದಾದರೂ ಪ್ರಮುಖ ದೈವಸ್ಥಾನಕ್ಕೆ ಭೇಟಿ ನೀಡಿ ಭಕ್ತರ ಆಕ್ರೋಶ ತಣ್ಣಗಾಗಿಸುತ್ತಾರಾ ಮತ್ತು ಈ ವಿವಾದಕ್ಕೆ ಸಂಪೂರ್ಣ ತೆರೆ ಬೀಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
