ಕೂಲಿ ಕಾರ್ಮಿಕರನ್ನ ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿ; 15 ಮಂದಿ ಸಾ*ವು

ಢಾಕಾ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿಯಾಗಿ 15 ಮಂದಿ ಸಾವನ್ನಪ್ಪಿ, 10 ಮಂದಿ ಗಾಯಗೊಂಡಿರುವ ಘಟನೆ ಇಂದು(ಮೇ 25) ಮುಂಜಾನೆ 5 ಗಂಟೆ ಸುಮಾರಿಗೆ ಬಾಂಗ್ಲಾದೇಶದಲ್ಲಿ ನಡೆದಿದೆ.

ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ವಾಯುವ್ಯಕ್ಕೆ ಸುಮಾರು 83 ಕಿಲೋಮೀಟರ್ ದೂರದಲ್ಲಿರುವ ತಂಗೈಲ್ ಜಿಲ್ಲೆಯ ಸೊರಾಟೊಯಿಲ್ ಹೆದ್ದಾರಿಯಲ್ಲಿ ನಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿದ 15 ದಿನಗೂಲಿ ಕಾರ್ಮಿಕರು ಈದ್ ಅಲ್-ಅಧಾ ಆಚರಣೆಗಾಗಿ ತಮ್ಮ ಕುಟುಂಬಗಳನ್ನು ಸೇರಲು ತಾಯ್ನಾಡಿಗೆ ಹೊರಟಿದ್ದರು.

ಕಬ್ಬಿಣದ ಸರಳುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್‌ನಲ್ಲಿ ಲಿಫ್ಟ್ ಪಡೆದು ಹಬ್ಬದ ರಜೆಗೆ ಮನೆಗೆ ಮರಳುತ್ತಿದ್ದ ವೇಳೆ ಢಾಕಾದಿಂದ ಉತ್ತರ ಪ್ರಾಂತ್ಯಗಳ ಕಡೆಗೆ ಚಲಿಸುತ್ತಿದ್ದಾಗ, ಸೊರಾಟೊಯಿಲ್ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಕಬ್ಬಿಣದ ಸರಳುಗಳ ಭಾರ ಮತ್ತು ವಾಹನದ ಭೀಕರ ಅಪಘಾತದಿಂದಾಗಿ 15 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ಫುವಾದ್ ಹೊಸೈನ್ ಅವರು ಮಾಹಿತಿ ನೀಡಿದ್ದಾರೆ.

ಮುಂಜಾನೆ ಭೀಕರ ಶಬ್ದ ಕೇಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಅಪಘಾತದ ಸ್ಥಳಕ್ಕೆ ಆಗಮಿಸಿ ತಕ್ಷಣವೇ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಗೊಂಡಿರುವ 10 ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !!