ಎಲ್ಲಿದ್ದಾರೆ ಖಮೇನಿ? ಅಂತಿಮ ಒಪ್ಪಂದಕ್ಕೆ ಟ್ರಂಪ್ ಕಾಯುತಿದ್ದರೂ ಇರಾನ್‌ನಿಂದ ಬರುತ್ತಿಲ್ಲ ಪ್ರತಿಕ್ರಿಯೆ; ಕಾರಣವೇನು?

ವಾಷಿಂಗ್ಟನ್/ಟೆಹ್ರಾನ್: ಇರಾನ್‌ನ ಅತ್ಯುನ್ನತ ನಾಯಕ (ಸುಪ್ರೀಂ ಲೀಡರ್) ಮೊಜ್ತಬಾ ಖಮೇನಿ ಹೊರಜಗತ್ತಿನೊಂದಿಗೆ ಸಂಪೂರ್ಣ ಸಂಪರ್ಕ ಕಡಿದುಕೊಂಡು, ಅತ್ಯಂತ ರಹಸ್ಯ ಹಾಗೂ ಅಜ್ಞಾತ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಅಮೆರಿಕದ ಗುಪ್ತಚರ ಇಲಾಖೆಯಿಂದ ಹೊರಬಿದ್ದಿದೆ.

ಇರಾನ್‌ನ ಇಡೀ ನಾಯಕತ್ವ ವ್ಯವಸ್ಥೆ ಈಗ ತೀವ್ರ ಆತಂಕದ ನೆರಳಿನಲ್ಲಿ ಸಿಲುಕಿದ್ದು, ಅಮೆರಿಕ ಸರ್ಕಾರದೊಂದಿಗೆ ನಡೆಯಬೇಕಿದ್ದ ಪ್ರಮುಖ ಶಾಂತಿ ಮಾತುಕತೆಗಳು ಮತ್ತು ಒಪ್ಪಂದಗಳು ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿವೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಗುಪ್ತಚರ ವರದಿಗಳ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ‘ಆಪರೇಷನ್ ಎಪಿಕ್ ಫ್ಯೂರಿ’ ವೈಮಾನಿಕ ದಾಳಿಯಲ್ಲಿ ಮೊಜ್ತಬಾ ಖಮೇನಿ ಅವರ ತಂದೆ ಅಲಿ ಖಮೇನಿ ಫೆಬ್ರವರಿ 28 ರಂದು ಸಾವನ್ನಪ್ಪಿದ್ದರು. ಇದೇ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೊಜ್ತಬಾ ಖಮೇನಿ, ಪ್ರಸ್ತುತ ‘ಕೋಮ್’ (Qom) ನಗರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಯುದ್ಧ ಆರಂಭವಾದಾಗಿನಿಂದ ಅವರು ಒಮ್ಮೆಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂಬುದು ಜಗತ್ತಿನಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇರಾನ್‌ನ ಪ್ರಸ್ತುತ ಪರಿಸ್ಥಿತಿ ಎಷ್ಟು ಭೀಕರವಾಗಿದೆಯೆಂದರೆ, ಅಲ್ಲಿನ ಉನ್ನತ ಸಚಿವರು ಮತ್ತು ಅಧಿಕಾರಿಗಳಿಗೂ ಸಹ ತಮ್ಮ ಪರಮೋಚ್ಚ ನಾಯಕ ಎಲ್ಲಿದ್ದಾರೆ ಎಂಬ ಕನಿಷ್ಠ ಮಾಹಿತಿಯೂ ಇಲ್ಲ. ಅಮೆರಿಕ ಕಳುಹಿಸುವ ಯಾವುದೇ ತುರ್ತು ಸಂದೇಶಗಳು ಖಮೇನಿ ಕೈ ಸೇರಲು ದಿನಗಟ್ಟಲೆ ಸಮಯ ಹಿಡಿಯುತ್ತಿದೆ. ಅತ್ತ ಇರಾನ್‌ನ ಪ್ರಮುಖ ನಾಯಕರು ಜೀವಭಯದಿಂದ ಕತ್ತಲೆಯ ಭೂಗತ ಬಂಕರ್‌ಗಳಲ್ಲಿ ಅಡಗಿಕೊಂಡಿದ್ದು, ಒಬ್ಬರನ್ನೊಬ್ಬರು ಸಂಪರ್ಕಿಸಲು ಪರದಾಡುತ್ತಿದ್ದಾರೆ. ಇವರ ಸಂವಹನದ ಹತಾಶೆಯನ್ನು ನೋಡಿದರೆ ಒಂದು ‘ಹಾಸ್ಯ ನಾಟಕ’ದಂತೆ ಭಾಸವಾಗುತ್ತಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಲೇವಡಿ ಮಾಡಿದ್ದಾರೆ.

ಈ ರಹಸ್ಯ ಕೋಟೆಯ ನಡುವೆ ಸಂದೇಶಗಳನ್ನು ತಲುಪಿಸಲು ಕೇವಲ ನಂಬಿಕಸ್ಥ ‘ಸಂದೇಶ ವಾಹಕರ’ (Couriers) ಜಾಲವನ್ನು ಮಾತ್ರ ಬಳಸಲಾಗುತ್ತಿದೆ. ಇದರಿಂದಾಗಿ ಯಾವುದೇ ನಿರ್ಧಾರ ಹೊರಬೀಳಬೇಕಾದರೂ ಇರಾನ್ ಸರ್ಕಾರ ತೀವ್ರ ವಿಳಂಬ ಧೋರಣೆ ಅನುಸರಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಲ್ಲಿದ್ದರೂ, ಇರಾನ್‌ನ ಸುಪ್ರೀಂ ಲೀಡರ್ ಕಡೆಯಿಂದ ಬರುವ ಪ್ರತಿಕ್ರಿಯೆಗಳು ಈಗಾಗಲೇ ಹಳೆಯದಾಗಿರುತ್ತಿವೆ (Dated).

ಆದಾಗ್ಯೂ, ಪ್ರಜ್ಞೆ ತಪ್ಪುವ ಮುನ್ನ ಖಮೇನಿ ಅವರು ತಮ್ಮ ಸಲಹೆಗಾರರಿಗೆ ಅಮೆರಿಕದೊಂದಿಗೆ ಯಾವ ವಿಷಯಗಳ ಬಗ್ಗೆ ಚಾಲನೆ ನೀಡಬೇಕು ಮತ್ತು ಯಾವ ವಿಷಯಗಳನ್ನು ಮುಟ್ಟಲೇಬಾರದು ಎಂಬ ಒಟ್ಟಾರೆ ಮಾರ್ಗಸೂಚಿಯನ್ನು ಮಾತ್ರ ನೀಡಿದ್ದಾರೆ ಎನ್ನಲಾಗಿದೆ. ಇರಾನ್‌ನ ಇಡೀ ಆಡಳಿತ ಮಂಡಳಿ ಧ್ವಂಸವಾಗಿರುವ ಈ ಸಂದರ್ಭದಲ್ಲಿ, ಅಣ್ವಸ್ತ್ರದ ಶಕ್ತಿ ಹೊಂದಿರುವ ಇರಾನ್ ಮುಂದಿನ ದಿನಗಳಲ್ಲಿ ಯಾವ ದಿಕ್ಕಿಗೆ ಸಾಗಲಿದೆ ಎಂಬ ಆತಂಕ ಇಡೀ ಜಗತ್ತನ್ನು ಕಾಡತೊಡಗಿದೆ.

error: Content is protected !!