ಮೋದಿ-ಮೆಲೋನಿ ʻಮೆಲೊಡಿ’ ಡಿಪ್ಲೊಮಸಿ! ಪಾರ್ಲೆ ಮಾಲೀಕ ಮೋದಿಗೆ ಧನ್ಯವಾದ ತಿಳಿಸಿದ್ದು ಯಾಕೆ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ಹೆಮ್ಮೆಯ ಬ್ರ್ಯಾಂಡ್ ಆದ ‘ಪಾರ್ಲೆ ಮೆಲೊಡಿ’ (Parle Melody) ಟಾಫಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಹೊಸದೊಂದು ‘ಮಧುರ’ ರಾಜತಾಂತ್ರಿಕತೆಗೆ ನಾಂದಿ ಹಾಡಿದ್ದಾರೆ. ಇಟಲಿ ಪ್ರಧಾನಿ ಮೆಲೋನಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ 12 ಸೆಕೆಂಡುಗಳ ವಿಡಿಯೋ ಈಗ ಜಾಗತಿಕ ಮಟ್ಟದಲ್ಲಿ ಭಾರೀ ವೈರಲ್ ಆಗಿದ್ದು, ಇಂಟರ್ನೆಟ್‌ನಲ್ಲಿ ‘ಮೆಲೊಡಿ’ ಅಲೆ ಎಬ್ಬಿಸಿದೆ.

ಪ್ರಧಾನಿ ಮೋದಿಯವರ ಈ ಅಪೂರ್ವ ನಡೆಗೆ ಪಾರ್ಲೆ ಪ್ರಾಡಕ್ಟ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಮಯಾಂಕ್ ಪ್ರವೀಣ್‌ಚಂದ್ರ ಶಾ ಅವರು ಪ್ರಧಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. “ಜಾಗತಿಕ ನಾಯಕರಿಗೆ ಪ್ರಧಾನಿ ಮೋದಿ ಅವರು ಮೆಲೊಡಿ ಚಾಕೊಲೇಟ್ ನೀಡಿರುವುದು ಸ್ವದೇಶಿ ಬ್ರ್ಯಾಂಡ್‌ಗಳ ಶಕ್ತಿಯನ್ನು ಜಗತ್ತಿಗೆ ಸಾರಿದಂತಾಗಿದೆ. ಭಾರತದ ಅತಿ ದೊಡ್ಡ ಟಾಫಿ ಬ್ರ್ಯಾಂಡ್ ಆಗಿರುವ ಮೆಲೊಡಿ ಈಗಾಗಲೇ 100ಕ್ಕೂ ಹೆಚ್ಚು ದೇಶಗಳಲ್ಲಿದೆ. ಇದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಇದಕ್ಕಿಂತ ದೊಡ್ಡ ಮನ್ನಣೆ ಬೇಕಿಲ್ಲ” ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಖಾಲಿಯಾದ ಚಾಕೊಲೇಟ್ ಸ್ಟಾಕ್
ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತದ ಪ್ರಮುಖ ಕ್ವಿಕ್-ಕಾಮರ್ಸ್ ಆಪ್‌ಗಳಾದ ಬ್ಲಿಂಕಿಟ್, ಝೆಪ್ಟೋ ಮತ್ತು ಇನ್‌ಸ್ಟಾಮಾರ್ಟ್‌ಗಳಲ್ಲಿ ಮೆಲೊಡಿ ಚಾಕೊಲೇಟ್‌ಗೆ ದಿಢೀರ್ ಬೇಡಿಕೆ ಹೆಚ್ಚಾಗಿದ್ದು, ಹಲವು ನಗರಗಳಲ್ಲಿ ಸ್ಟಾಕ್ ಸಂಪೂರ್ಣ ಖಾಲಿಯಾಗಿದೆ. ಇನ್ನೊಂದೆಡೆ, ಶೇರು ಮಾರುಕಟ್ಟೆಯ ಹೂಡಿಕೆದಾರರು ‘ಪಾರ್ಲೆ’ ಹೆಸರನ್ನು ಹುಡುಕಿ, ಚಾಕೊಲೇಟ್ ತಯಾರಿಸದ ‘ಪಾರ್ಲೆ ಇಂಡಸ್ಟ್ರೀಸ್’ (ರಿಯಲ್ ಎಸ್ಟೇಟ್ ಸಂಸ್ಥೆ) ಶೇರುಗಳನ್ನು ಮುಗಿಬಿದ್ದು ಖರೀದಿಸಿದ್ದರಿಂದ ಆ ಕಂಪನಿಯ ಶೇರುಗಳು ಶೇ. 5 ರಷ್ಟು ಜಿಗಿತ ಕಂಡ ಪ್ರಹಸನವೂ ನಡೆದಿದೆ. ಪಾರ್ಲೆ ಪ್ರಾಡಕ್ಟ್ಸ್ ಸದ್ಯಕ್ಕೆ ಪಬ್ಲಿಕ್ ಲಿಸ್ಟಿಂಗ್ (IPO) ಆಗುವ ಯಾವುದೇ ಪ್ಲಾನ್ ಹೊಂದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ʻಮೆಲೋನಿ + ಮೋದಿ’ ಹೆಸರನ್ನು ಸೇರಿಸಿ ‘Melodi’ ಎಂಬ ಹ್ಯಾಶ್‌ಟ್ಯಾಗ್ ಸದಾ ಟ್ರೆಂಡ್ ಆಗುತ್ತಿದೆ. ಆದರೆ ಈ ಚಾಕೊಲೇಟ್ ಗಿಫ್ಟ್ ಕೇವಲ ಮೀಮ್ಸ್‌ಗೆ ಸೀಮಿತವಾಗಿಲ್ಲ. ಭಾರತ ಮತ್ತು ಇಟಲಿ ನಡುವಿನ ದ್ವಿಪಕ್ಷೀಯ ವ್ಯಾಪಾರವು ಈಗಾಗಲೇ 16.77 ಬಿಲಿಯನ್ ಡಾಲರ್ ದಾಟಿದ್ದು, ಚೀನಾದ ಮೂಲಸೌಕರ್ಯ ಜಾಲಕ್ಕೆ ಪರ್ಯಾಯವಾಗಿ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (IMEC) ಅಭಿವೃದ್ಧಿಪಡಿಸುವಲ್ಲಿ ಎರಡೂ ದೇಶಗಳು ಅತ್ಯಂತ ಪ್ರಮುಖ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿವೆ.

error: Content is protected !!