ಮೇ 24: ಮುಲ್ಕಿಯಲ್ಲಿ ಅದ್ಧೂರಿ ‘ಕೋಸ್ಟಲ್‌ ಫಿಲಂ ಅವಾರ್ಡ್ಸ್‌ 2026’ ಪ್ರದಾನ

ಮಂಗಳೂರು: ಕರಾವಳಿಯ ಚಿತ್ರರಂಗದಲ್ಲಿ ಸತತ ಐದನೇ ಬಾರಿಗೆ ಅತಿ ದೊಡ್ಡ ಸಿನಿಗಾಲಾ ಎನಿಸಿಕೊಂಡಿರುವ ‘ಸ್ಯಾಂಡಿಸ್ ಕಂಪೆನಿʼ ಅರ್ಪಿಸುವ ಸಿನಿ ಗ್ಯಾಲಕ್ಸಿ ಕೋಸ್ಟಲ್‌ ಫಿಲಂ ಅವಾರ್ಡ್ಸ್‌ 2026’ ಈ ಬಾರಿ ಮೇ 24ರ ಭಾನುವಾರ ಸಂಜೆ 3:00 ಗಂಟೆಗೆ ಮುಲ್ಕಿಯ ಸುಂದರರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್ ಕೊಲ್ನಾಡ್ ಇಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಲಿದೆ ಎಂದು ಸ್ಯಾಂಡಿಸ್ ಕಂಪೆನಿಯ ಮಾಲೀಕರಾದ ಸಂದೇಶ್‌ ರಾಜ್‌ ಬಂಗೇರ ಪ್ರಕಟಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಿತ್ರರಂಗ ಹಾಗೂ ರಾಜಕೀಯ ವಲಯದ ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಪ್ರಸಿದ್ಧ ನಿರ್ದೇಶಕ ತರುಣ್ ಸುಧೀರ್, ನಟಿ ಸೋನಾಲ್ ಮೊಂತೆರೋ, ನಿರ್ಮಾಪಕಿ ಶಿಲ್ಪಾ ಗಣೇಶ್ ಹಾಗೂ ನಟ ತ್ರಿವಿಕ್ರಮ ಭಾಗವಹಿಸಲಿದ್ದಾರೆ. ಇವರೊಂದಿಗೆ ವಿಧಾನಸಭಾ ಸಭಾಧ್ಯಕ್ಷರಾದ ಯು. ಟಿ. ಖಾದರ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಎ. ಕೋಟ್ಯಾನ್, ಮೈಂಡ್ ಮೆಕ್ಯಾನಿಸಂ ಸ್ಥಾಪಕರಾದ ಶ್ರೀನಾಥ್ ಶೆಟ್ಟಿ, ಆಸ್ತ್ರ ಗ್ರೂಪ್ ಸ್ಥಾಪಕರಾದ ಲಂಚುಲಾಲ್ ಕೆ.ಎಸ್. ಮತ್ತು ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಸೇರಿದಂತೆ ತುಳು ಚಿತ್ರರಂಗದ ದಿಗ್ಗಜ ಕಲಾವಿದರು, ನಿರ್ಮಾಪಕರು ಹಾಗೂ ತಂತ್ರಜ್ಞರು ಉಪಸ್ಥಿತರಿರಲಿದ್ದಾರೆ ಎಂದರು.

ಈ ಬಾರಿ 2025ರಲ್ಲಿ ತೆರೆಕಂಡಿರುವ ಒಟ್ಟು 8 ಸಿನಿಮಾಗಳು ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿದ್ದು, ‘ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್’ ಹಾಗೂ ‘ವರ್ಸಟೈಲ್ ಆಕ್ಟರ್ ಅವಾರ್ಡ್’ ಸೇರಿ ಒಟ್ಟು 30 ವಿಭಾಗಗಳಲ್ಲಿ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಯಲಿದೆ ಎಂದರು. ಇದೇ ಸಂದರ್ಭದಲ್ಲಿ ಸಿನಿಮಾ ರಂಗದಲ್ಲಿ ಅಪೂರ್ವ ಸಾಧನೆಗೈದ ಡಾ. ದೇವದಾಸ್ ಕಾಪಿಕಾಡ್ ಹಾಗೂ ಸರೋಜಿನಿ ಶೆಟ್ಟಿ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ತುಳು ಚಿತ್ರರಂಗದ ನಟ-ನಟಿಯರಿಂದ ಜಬರ್ದಸ್ತ್ ನೃತ್ಯ, ಸಿಸಿಲಿಂಗ್ ಗಾಯ್ಸ್ ತಂಡದಿಂದ ರಸಮಂಜರಿ ಹಾಗೂ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಲಿವೆ.

ಉಚಿತ ಪ್ರವೇಶಾವಕಾಶ:
ಕರಾವಳಿಯ ಸಿನಿಮಾ ಪ್ರೇಮಿಗಳಿಗೆ ಮತ್ತು ಸಾರ್ವಜನಿಕರಿಗೆ ಈ ಭವ್ಯ ಕಾರ್ಯಕ್ರಮವನ್ನು ಕಣ್ಣುಂಬಿಕೊಳ್ಳಲು ಸಂಪೂರ್ಣ ಉಚಿತ ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆ. ಇಡೀ ಕಾರ್ಯಕ್ರಮವನ್ನು ಪ್ರಸಿದ್ಧ ನಿರೂಪಕರಾದ ಶರ್ಮಿಳಾ ಅಮೀನ್ ಮತ್ತು ವಿನೀತ್ ಕುಮಾರ್ ಅವರು ಅತ್ಯಂತ ರೋಚಕವಾಗಿ ನಡೆಸಿಕೊಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸಚಿನ್ ಉಪ್ಪಿನಂಗಡಿ ಹಾಗೂ ಯಶ್ ರಾಜ್ ಉಪಸ್ಥಿತರಿದ್ದರು.

error: Content is protected !!