ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಸದ್ಯಕ್ಕಿಲ್ಲ ಟಿಕೆಟ್ ದರ ಹೆಚ್ಚಳ

ಬೆಂಗಳೂರು: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಇದೀಗ ಗುಡ್‌ನ್ಯೂಸ್ ಒಂದು ಸಿಕ್ಕಿದ್ದು, ನಮ್ಮ ಮೆಟ್ರೋ ಟಿಕೆಟ್ ದರ ಮತ್ತೊಮ್ಮೆ ಏರಿಕೆ ಆಗಬಹುದು ಎಂಬ ಚರ್ಚೆ ನಡುವೆ ಬಿಎಂಆರ್‌ಸಿಎಲ್‌ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

ಏ.23ರಂದು ನಡೆದ ಬೋರ್ಡ್ ಮೀಟಿಂಗ್‌ನಲ್ಲಿ ಬಿಎಂಆರ್‌ಸಿಎಲ್ ದರ ಏರಿಕೆಗೆ ಪ್ರಸ್ತಾಪ ಇಟ್ಟಿತ್ತು. ಆ ಸಭೆಯಲ್ಲಿ ದರ ಏರಿಕೆ ಬೇಡ ಅಂತ ನಿರ್ಧಾರ ಆಗಿತ್ತು. ಬಳಿಕ ಮತ್ತೆ ದರ ಏರಿಕೆ ವಿಚಾರ ಮುನ್ನಲೆಗೆ ಬಂದ ಬೆನ್ನಲ್ಲೇ ದರ ಏರಿಕೆ ಸದ್ಯಕ್ಕೆ ಬೇಡ ಅನ್ನೋ ನಿರ್ಣಯಕ್ಕೆ ಬೋರ್ಡ್ ಬಂದಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದ ಬೋರ್ಡ್ ಸಭೆಯಲ್ಲಿ ಈ ಬಗ್ಗೆ ಬಿಎಂಆರ್‌ಸಿಎಲ್ ಪ್ರಸ್ತಾಪ ಮಂಡಿಸಿತ್ತು. ಆದರೆ ಸದ್ಯಕ್ಕೆ ದರ ಏರಿಕೆ ಬೇಡ ಮುಂದಿನ ಬೋರ್ಡ್ ಮೀಟಿಂಗ್‌ನಲ್ಲಿ ಈ ವಿಚಾರದ ಬಗ್ಗೆ ಮತ್ತೆ ಚರ್ಚೆ ನಡೆಸೋಣ ಎಂದು ಸೂಚನೆ ನೀಡಲಾಗಿದೆ. ಹೀಗಾಗಿ ಸದ್ಯಕ್ಕೆ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ಇಲ್ಲದಿರೋದು ಕೊಂಚ ನಿರಾಳ ತಂದಿದೆ.

ಇದಕ್ಕೂ ಮುನ್ನ ಕಳೆದ ಫೆ.9ರಿಂದ ಅನ್ವಯ ಆಗುವಂತೆ 5 ರೂ. ದರ ಏರಿಕೆಗೆ ಬಿಎಂಆರ್‌ಸಿಎಲ್ ಮುಂದಾಗಿತ್ತು. ಆದರೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ದರ ಏರಿಕೆ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗಿತ್ತು. ಇದಾದ ಬಳಿಕ ಸರ್ಕಾರ, ಬೋರ್ಡ್ ಮೀಟಿಂಗ್‌ನಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ ಈಗ ಬೋರ್ಡ್ ಮೀಟಿಂಗ್‌ನಲ್ಲೂ ದರ ಏರಿಕೆ ಸದ್ಯಕ್ಕೆ ಬೇಡ ಅನ್ನೋ ನಿರ್ಧಾರಕ್ಕೆ ಬರಲಾಗಿದೆ.

error: Content is protected !!