ಮುಂದಿನ ಒಂದು ತಿಂಗಳವರೆಗೆ ಬಸ್ ಟಿಕೆಟ್ ದರ ಏರಿಕೆ ಇಲ್ಲ : ದ.ಕ. ಜಿಲ್ಲಾ ಬಸ್ ಮಾಲಕರ ಸಂಘ

ಮಂಗಳೂರು: ಮುಂದಿನ ಒಂದು ತಿಂಗಳವರೆಗೆ ಬಸ್ ಟಿಕೆಟ್ ದರ ಏರಿಸುವ ಪ್ರಸ್ತಾವನೆ ಇಲ್ಲ ಎಂದು ದ. ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ಹೇಳಿದ್ದಾರೆ.

ಹಂಪನಕಟ್ಟೆಯ ಬಸ್ ಮಾಲಕರ ಸಂಘದ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಯುದ್ಧದ ಪರಿಣಾಮದಿಂದಾಗಿ ಸದ್ಯದ ಪರಿಸ್ಥಿತಿ ಗಮನಿಸಿದಾಗ ಮುಂದಿನ ಒಂದು ತಿಂಗಳಲ್ಲಿ ಡೀಸೆಲ್ ದರ ಸುಮಾರು 20ರಿಂದ 25 ರೂ. ಏರಿಕೆಯಾಗುವ ಭೀತಿ ಎದುರಾಗಿದೆ. ಅಲ್ಲದೆ ಡೀಸೆಲ್ ಅಭಾವ ಎದುರಾಗಿ ಕಾಳ ಸಂತೆಯಲ್ಲಿ ಮಾರಾಟವಾಗುವ ಆತಂಕವೂ ಇದೆ. ಈ ಹಿನ್ನೆಲೆ ಇಂಧನ ಸ್ಥಿತಿಗತಿಯನ್ನು ಆಧರಿಸಿ ಮುಂದಿನ ಒಂದು ತಿಂಗಳಲ್ಲಿ ದರ ಪರಿಷ್ಕರಣೆ ಬಗ್ಗೆ ಮತ್ತೊಮ್ಮೆ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದರು.

2021ರಲ್ಲಿ ಖಾಸಗಿ ಬಸ್ ದರ ಏರಿಕೆ ಮಾಡಲಾಗಿದ್ದು, ಕಳೆದ ಐದು ವರ್ಷಗಳಲ್ಲಿ ಯಾವುದೇ ಏರಿಕೆಯಾಗಿಲ್ಲ. ಸದ್ಯ ಬಸ್ ಮಾಲಕರು ವಿಪರೀತ ನಷ್ಟ ಅನುಭವಿಸುತ್ತಿದ್ದಾರೆ. ಬ್ಯಾಟರಿ, ಬಿಡಿ ಭಾಗ, ಬಾಡಿ ನಿರ್ಮಾಣ, ಆಯಿಲ್, ಗ್ರೀಸ್, ಪೈಂಟ್ ಇತ್ಯಾದಿಗಳ ದರ ಶೇ. 30ರಷ್ಟು ಏರಿಕೆಯಾಗಿದೆ. 3 ತಿಂಗಳಿಗೆ ಸುಮಾರು 50 ಸಾವಿರ ರೂ. ಟ್ಯಾಕ್ಸ್, ವಾರ್ಷಿಕ ಒಂದರಿಂದ ಒಂದೂವರೆ ಲಕ್ಷ ರೂ. ಇನ್ಶೂರೆನ್ಸ್, ಇಎಂಐ ಇತ್ಯಾದಿ ಪಾವತಿಸುತ್ತಿದ್ದೇವೆ. ಮ್ಯಕಾನಿಕ್ ಲೇಬರ್ ಸುಮಾರು ಶೇ. 50ರಷ್ಟು ಏರಿಕೆಯಾಗಿದೆ. ಈ ನಡುವೆ ಡೀಸೆಲ್ ದರ ಏರಿಕೆ ಬಸ್ ಮಾಲಕರಿಗೆ ಹೊರೆಯಾಗಿದೆ. ಟಿಕೆಟ್ ದರವನ್ನು ಪದೇ ಪದೆ ಹೆಚ್ಚಳ ಮಾಡುವ ಪ್ರವೃತ್ತಿ ಇಲ್ಲ. ಹೀಗಾಗಿ ಒಂದು ತಿಂಗಳು ಕಾದು ನೋಡುವ ತಂತ್ರ ಅನುಸರಿಸುತ್ತೇವೆ ಎಂದಿದ್ದಾರೆ.

error: Content is protected !!