ಬೀದಿ ನಾಯಿ ನಿಯಂತ್ರಣ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ


ನವದೆಹಲಿ: ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಸಂಪೂರ್ಣ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಇಂದು(ಮೇ 19) ಆದೇಶಿಸಿದೆ.

ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2025ರಲ್ಲಿ ನೀಡಿದ್ದ ಕ್ರಿಮಿನಾಶಕ ನಂತರ ನಾಯಿಗಳನ್ನು ಅದೇ ಸ್ಥಳಕ್ಕೆ ಬಿಡಬಾರದು ಎಂಬ ಆದೇಶವನ್ನು ಮಾರ್ಪಡಿಸಬೇಕೆಂದು ಸಲ್ಲಿಸಿದ್ದ ಅರ್ಜಿಗಳನ್ನೆಲ್ಲಾ ನ್ಯಾಯಾಲಯ ಸಂಪೂರ್ಣವಾಗಿ ವಜಾಗೊಳಿಸಿದೆ. ಮಕ್ಕಳ ಮೇಲೆ ನಾಯಿಗಳು ನಡೆಸುತ್ತಿರುವ ದಾಳಿ ಆತಂಕಕಾರಿ ಎಂದು ಪೀಠ ಅಭಿಪ್ರಾಯಪಟ್ಟಿತು.

“ಬೀದಿ ನಾಯಿಗಳು ಸಾರ್ವಜನಿಕರ ಮೇಲೆ, ಅದರಲ್ಲೂ ವಿಶೇಷವಾಗಿ ಅಮಾಯಕ ಮುಗ್ಧ ಮಕ್ಕಳ ಮೇಲೆ ದಾಳಿ ನಡೆಸಿ ಪ್ರಾಣ ತೆಗೆಯುತ್ತಿರುವ ಭೀಕರ ನಿದರ್ಶನಗಳನ್ನು ನಾವು ಯಾವುದೇ ಕಾರಣಕ್ಕೂ ಕಡೆಗಣಿಸಲು ಸಾಧ್ಯವಿಲ್ಲ. ಸಾರ್ವಜನಿಕರ ಸುರಕ್ಷತೆಯೇ ನಮಗೆ ಮುಖ್ಯ. ಅರ್ಜಿದಾರರು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ನಿಯಮಗಳಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಬಲವಾದ ಕಾರಣಗಳನ್ನು ನೀಡಿಲ್ಲ” ಎಂದು ಸುಪ್ರೀಂ ಕೋರ್ಟ್ ಪೀಠವು ಸ್ಪಷ್ಟಪಡಿಸಿತು.

ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, “ದೇಶದಲ್ಲಿ ಬೀದಿ ನಾಯಿಗಳ ಜನಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ವಿಸ್ತರಿಸುವಲ್ಲಿ ರಾಜ್ಯ ಸರ್ಕಾರಗಳ ಪ್ರಯತ್ನಗಳು ಎಲ್ಲಿಯೂ ಕಾಣಿಸುತ್ತಿಲ್ಲ. ಕ್ರಿಮಿನಾಶಕ ಮತ್ತು ಲಸಿಕೆ ಅಭಿಯಾನಗಳು ಯಾವುದೇ ನಿರ್ದಿಷ್ಟ ಯೋಜನೆ ಇಲ್ಲದೆ, ಅತ್ಯಂತ ವಿರಳವಾಗಿ ನಡೆಯುತ್ತಿವೆ. ಇದು ಪ್ರಾಣಿ ಜನನ ನಿಯಂತ್ರಣ ಚೌಕಟ್ಟಿನ ಮೂಲ ಉದ್ದೇಶವನ್ನೇ ಸೋಲಿಸುತ್ತದೆ” ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

error: Content is protected !!