ಅಸ್ವಸ್ಥರಾಗಿ ಮೃತಪಟ್ಟ ಅಪರಿಚಿತ ವ್ಯಕ್ತಿ: ಗುರುತು ಪತ್ತೆಗೆ ದಕ್ಷಿಣ ಪೊಲೀಸ್ ಠಾಣೆ ಮನವಿ

ಮಂಗಳೂರು: ನಗರದ ಅತ್ತಾವರ ಕಟ್ಟೆಯ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ನೂತನ್ (ಅಂದಾಜು 45-50 ವರ್ಷ) ಎಂದು ಗುರುತಿಸಲಾಗಿದ್ದು, ಅವರ ಪೂರ್ಣ ವಿವರ ಹಾಗೂ ವಾರಸುದಾರರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.

ರಸ್ತೆ ಬದಿ ಅಸ್ವಸ್ಥರಾಗಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ದುರದೃಷ್ಟವಶಾತ್ ಅವರು ಮರಣ ಹೊಂದಿದ್ದಾರೆ. ಈ ಸಂಬಂಧ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರ ಚಹರೆ ವಿವರ:
ಎತ್ತರ: ಸುಮಾರು 5.9 ಅಡಿ
ದೇಹದಾರ್ಢ್ಯ: ಸಾಧಾರಣ ಶರೀರ, ಕೋಲು ಮುಖ, ಗೋಧಿ ಮೈಬಣ್ಣ
ಕೂದಲು/ಗಡ್ಡ: 5 ಇಂಚು ಉದ್ದದ ಕಪ್ಪು-ಬಿಳಿ ಮಿಶ್ರಿತ ತಲೆಕೂದಲು ಹಾಗೂ ಅರ್ಧ ಇಂಚು ಉದ್ದದ ಗಡ್ಡ-ಮೀಸೆ ಇರುತ್ತದೆ.
ವಿಶೇಷ ಗುರುತುಗಳು: ಎಡ ಕಿಬ್ಬೊಟ್ಟೆ ಹಾಗೂ ಎಡ ಭುಜದ ಮೇಲೆ ಕಪ್ಪು ಮಚ್ಚೆ ಇದೆ. ಬಲಗೈ ಹೆಬ್ಬೆರಳಿನಲ್ಲಿ ಕಪ್ಪು ಬಣ್ಣದ ಉಂಗುರ ಧರಿಸಿದ್ದಾರೆ.

ಮೃತರ ಬಗ್ಗೆ ಯಾವುದೇ ಮಾಹಿತಿ ಇರುವವರು ಅಥವಾ ಅವರ ವಾರಸುದಾರರು ಕಂಡುಬಂದಲ್ಲಿ ತಕ್ಷಣವೇ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

error: Content is protected !!