ಸೀರಿಯಲ್‌ನಲ್ಲಿ ಅಪ್ಪಟ ಸಾಂಪ್ರದಾಯಿಕ, ವೆಬ್ ಸರಣಿಯಲ್ಲಿ ಸಖತ್ ಬೋಲ್ಡ್; ನಟಿ ಮೌನ ಗುಡ್ಡೆಮನೆ ಹೊಸ ಅವತಾರಕ್ಕೆ ಫ್ಯಾನ್ಸ್ ಶಾಕ್!

ಬೆಂಗಳೂರು: ತೆರೆಮೇಲೆ ಸೀರೆ ಉಟ್ಟು, ಮಲ್ಲಿಗೆ ಮುಡಿದು, ಅಪ್ಪಟ ಹಳ್ಳಿ ಹುಡುಗಿಯಂತೆ ಅಥವಾ ಸಂಪ್ರದಾಯಸ್ಥ ಮನೆತನದ ಸೊಸೆಯಂತೆ ಕಾಣಿಸಿಕೊಳ್ಳುವ ಕಿರುತೆರೆ ನಟಿಯರು ರಿಯಲ್ ಲೈಫ್‌ನಲ್ಲಿ ಹೇಗೆ ಇರುತ್ತಾರೆ ಎಂಬ ಕುತೂಹಲ ಸದಾ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ನಟಿಯರ ಮೇಲೆ ಒಂದಿಷ್ಟು ಇಮೇಜ್ ಬೌಂಡರಿಗಳಿರುತ್ತವೆ. ಆದರೆ, ಕ್ಯಾಮೆರಾ ಹಿಂದಿನ ಪ್ರಪಂಚವೇ ಬೇರೆ! ಈಗ ʻರಾಮಾಚಾರಿ’ ಖ್ಯಾತಿಯ ನಟಿ ಮೌನ ಗುಡ್ಡೆಮನೆ ಅವರ ವಿಷಯದಲ್ಲೂ ಇದೇ ಆಗಿದೆ. ತೆರೆಮೇಲೆ ಸಖತ್ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುತ್ತಿದ್ದ ಚಾರುಲತಾ, ಈಗ ದಿಢೀರನೆ ಬೋಲ್ಡ್ ಅವತಾರ ತಾಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹಲ್ಚಲ್ ಎಬ್ಬಿಸಿದ್ದಾರೆ!

ʻಬುಲೆಟ್ ಮೈಕ್ರೋ ಡ್ರಾಮಾ’ದಲ್ಲಿ ಮೂಡಿಬಂದಿರುವ ‘ಲವ್ ಪಂಚ್’ ಹೆಸರಿನ ಮೈಕ್ರೋ ವೆಬ್ ಸರಣಿಯಲ್ಲಿ ಮೌನ ಗುಡ್ಡೆಮನೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ‘ಪಾರು’ ಧಾರಾವಾಹಿ ಮೂಲಕ ಹೆಂಗಳೆಯರ ಮನಗೆದ್ದಿದ್ದ ನಟ ಶರತ್ ಪದ್ಮನಾಭ್ ಈ ಸರಣಿಗೆ ಹೀರೋ. ಪ್ರಸ್ತುತ ಜೀ ಕನ್ನಡದ ‘ನಾ ನಿನ್ನ ಬಿಡಲಾರೆ’ ಸೀರಿಯಲ್‌ನಲ್ಲಿ ಬ್ಯುಸಿಯಿರುವ ಶರತ್, ಈಗ ಮೌನ ಜೊತೆ ಸಖತ್ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಬೋಲ್ಡ್ ಹಾಗೂ ಹಾಟ್ ಕೆಮಿಸ್ಟ್ರಿ ನೋಡಿದ ಕಿರುತೆರೆ ವೀಕ್ಷಕರು ಒಂದು ಕ್ಷಣ ಕಣ್ಣರಳಿಸಿ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಇವರಿಬ್ಬರ ಸರಣಿಯ ರಹಸ್ಯ ಕ್ಲಿಪ್‌ಗಳು ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ರಿಲೀಸ್ ಆಗಿರುವ ‘ಲವ್ ಪಂಚ್’ ಟ್ರೇಲರ್ ನೋಡಿದರೆ ಇದೊಂದು ಕ್ಯೂಟ್ ಅಂಡ್ ಹಾಟ್ ಕಾಲೇಜ್ ಲವ್ ಸ್ಟೋರಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆರಂಭದಲ್ಲಿ ಸಣ್ಣಪುಟ್ಟ ವಿಷಯಕ್ಕೆ ಕಿತ್ತಾಡಿಕೊಳ್ಳುವ ನಾಯಕ-ನಾಯಕಿ, ನಂತರ ಒಬ್ಬರಿಗೊಬ್ಬರು ಹತ್ತಿರವಾಗುತ್ತಾರೆ. ಇಬ್ಬರ ನಡುವೆ ಪ್ರೀತಿ ಅಂಕುರಿಸಿ ರೋಮ್ಯಾನ್ಸ್ ಜೋರಾಗುವಾಗಲೇ ಕಥೆಗೆ ದೊಡ್ಡದೊಂದು ಟ್ವಿಸ್ಟ್ ಸಿಗುತ್ತದೆ ಎಂಬುದನ್ನು ಟ್ರೇಲರ್‌ನಲ್ಲಿ ಸಸ್ಪೆನ್ಸ್ ಆಗಿ ಇಡಲಾಗಿದೆ. ಸೀರಿಯಲ್ ಪ್ರೇಕ್ಷಕರಿಗೆ ಇದು ಪಕ್ಕಾ ‘ಬೋಲ್ಡ್ ಶಾಕ್’ ನೀಡಿದೆ ಎನ್ನಬಹುದು.

ʻಚಾರುಲತಾ’ ಇಮೇಜ್‌ನಿಂದ ಹೊರಬಂದ ನಟಿ:
ಕಲರ್ಸ್ ಕನ್ನಡದ ಸೂಪರ್ ಹಿಟ್ ʻರಾಮಾಚಾರಿ’ ಧಾರಾವಾಹಿಯಲ್ಲಿ ‘ಚಾರುಲತಾ’ ಪಾತ್ರದ ಮೂಲಕ ಮನೆಮಾತಾಗಿದ್ದ ಮೌನ, ಆ ಸೀರಿಯಲ್ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಿದ್ದರು. ಸದ್ಯ ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ನಟಿಸುತ್ತಿರುವ ಮೌನ, ಇಷ್ಟು ದಿನ ತಮ್ಮ ಮೇಲಿದ್ದ ʻಹೋಮ್ಲಿ ಗರ್ಲ್’ ಇಮೇಜ್ ಅನ್ನು ಈ ಮೈಕ್ರೋ ಸರಣಿಯ ಮೂಲಕ ಬ್ರೇಕ್ ಮಾಡಿದ್ದಾರೆ. ನಟಿಯರು ಕೇವಲ ಸೀರಿಯಲ್‌ಗಷ್ಟೇ ಸೀಮಿತವಲ್ಲ, ಪಾತ್ರ ಡಿಮ್ಯಾಂಡ್ ಮಾಡಿದರೆ ಗ್ಲಾಮರಸ್ ಆಗಿಯೂ ಮಿಂಚಬಲ್ಲರು ಎಂಬುದನ್ನು ಮೌನ ಸಾಬೀತುಪಡಿಸಿದ್ದಾರೆ. ಸದ್ಯಕ್ಕಂತೂ ಗಾಂಧಿನಗರದ ಗಲ್ಲಿಯಿಂದ ಹಿಡಿದು ಸೋಷಿಯಲ್ ಮೀಡಿಯಾದ ರಂಗಿನ ಲೋಕದವರೆಗೆ ಈ ‘ಲವ್ ಪಂಚ್’ದ್ದೇ ಸದ್ದು!

error: Content is protected !!