ಮಂಗಳೂರಿನಲ್ಲಿ ಮೇ 29ರಿಂದ ‘ಇಂಡಿಯನ್ ಓಪನ್ ಆಫ್ ಸರ್ಫಿಂಗ್’ ಮೇಳ; ಏಷ್ಯನ್ ಗೇಮ್ಸ್‌ಗೆ ದಿಕ್ಸೂಚಿ ಎಂದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

ಮಂಗಳೂರು: ದೇಶದ ಕರಾವಳಿ ತೀರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಲ ಕ್ರೀಡೆಯಾದ ಸರ್ಫಿಂಗ್‌ನ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026’ರ (NMPA Indian Open of Surfing) 7ನೇ ಆವೃತ್ತಿಯು ಇದೇ ಮೇ 29ರಿಂದ 31ರವರೆಗೆ ಮಂಗಳೂರಿನ ತಣ್ಣೀರುಭಾವಿಯ ಬ್ಲೂ ಫ್ಲ್ಯಾಗ್ ಪರಿಸರ ಸ್ನೇಹಿ ಕಡಲತೀರದಲ್ಲಿ (Blue Bay Eco Beach) ಜರುಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಪ್ರಕಟಿಸಿದರು.

ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಜಿಲ್ಲಾಧಿಕಾರಿಗಳು, “ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರಲ್ಲಿ (Aichi-Nagoya Asian Games 2026) ಸರ್ಫಿಂಗ್ ಕ್ರೀಡೆಯು ಮೊದಲ ಬಾರಿಗೆ ಅಧಿಕೃತವಾಗಿ ಪದಾರ್ಪಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸರ್ಫಿಂಗ್ ತಂಡದಲ್ಲಿ ಸ್ಥಾನ ಪಡೆಯಲು ಆಕಾಂಕ್ಷಿಗಳಾಗಿರುವ ದೇಶದ ಉನ್ನತ ಸರ್ಫಿಂಗ್ ಪಟುಗಳಿಗೆ ಮಂಗಳೂರಿನಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅತ್ಯಂತ ನಿರ್ಣಾಯಕ ವೇದಿಕೆಯಾಗಲಿದೆ. ಇತ್ತೀಚೆಗಷ್ಟೇ ಭಾರತೀಯ ಸರ್ಫಿಂಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ಗೆ ಅರ್ಹತಾ ಕೋಟಾವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯ,” ಎಂದರು.

“ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ (SFI) ಇದರ ಆಶ್ರಯದಲ್ಲಿ ನಡೆಯಲಿರುವ ಈ ಮೆಗಾ ಟೂರ್ನಮೆಂಟ್‌ಗೆ ನವ ಮಂಗಳೂರು ಬಂದರು ಪ್ರಾಧಿಕಾರ (NMPA) ಸತತ ಮೂರನೇ ವರ್ಷವೂ ಪ್ರಧಾನ ಪ್ರಾಯೋಜಕತ್ವ ವಹಿಸಿಕೊಂಡಿದೆ. ಇದರೊಂದಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡುತ್ತಿವೆ. ‘ಸೈಕಲ್ ಅಗರಬತ್ತಿ’ ಮತ್ತು ‘ಡಿಕನ್ಸ್ಟ್ರಕ್ಟ್’ ಸಂಸ್ಥೆಗಳು ಗೋಲ್ಡ್ ಸ್ಪಾನ್ಸರ್‌ಗಳಾಗಿ ಹಾಗೂ ‘ನಾರ್ದರ್ನ್ ಸ್ಕೈ’ ಸಂಸ್ಥೆಯು ವೆನ್ಯೂ ಪಾರ್ಟ್ನರ್ ಆಗಿ ಕೈಜೋಡಿಸಿವೆ,” ಎಂದು ಡಿಸಿ ಮಾಹಿತಿ ನೀಡಿದರು.

ಕರಾವಳಿ ಪ್ರವಾಸೋದ್ಯಮ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಉತ್ತೇಜನ:
“ಕರ್ನಾಟಕ ಸರ್ಕಾರವು ಸತತ 7 ವರ್ಷಗಳಿಂದ ಈ ವಿಶಿಷ್ಟ ಕ್ರೀಡೆಗೆ ಸರಣಿ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಕರಾವಳಿ ಕ್ರೀಡೆ ಹಾಗೂ ಪ್ರವಾಸೋದ್ಯಮದ ದೀರ್ಘಾವಧಿ ಬೆಳವಣಿಗೆಗೆ ಬದ್ಧವಾಗಿದೆ. ಮಂಗಳೂರು ಈಗ ಕೇವಲ ಧಾರ್ಮಿಕ ಪ್ರವಾಸೋದ್ಯಮಕ್ಕಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದ ಬೀಚ್ ಪ್ರವಾಸೋದ್ಯಮ ಮತ್ತು ಸರ್ಫಿಂಗ್ ಹಬ್ ಆಗಿ ಗುರುತಿಸಿಕೊಳ್ಳುತ್ತಿದೆ. ಏಪ್ರಿಲ್‌ನಲ್ಲಿ ನಡೆದ ಲಿಟಲ್ ಅಂಡಮಾನ್ ಪ್ರೊ 2026ರ ಬಳಿಕ, ಇದು ರಾಷ್ಟ್ರೀಯ ಸರಣಿಯ ಎರಡನೇ ಪ್ರಮುಖ ನಿಲ್ದಾಣವಾಗಿದ್ದು, ಕೇರಳ, ಗೋವಾ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ನಾನಾ ಭಾಗಗಳ ಶ್ರೇಷ್ಠ ಕ್ರೀಡಾಪಟುಗಳು ಇಲ್ಲಿ ಕಡುವೈರತ್ವದ ಪ್ರದರ್ಶನ ನೀಡಲಿದ್ದಾರೆ,” ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.

ಇದೇ ಸಂದರ್ಭದಲ್ಲಿ ಸರ್ಫಿಂಗ್‌ ಮೇಳದ ಲೋಗೋವನ್ನು ಡಿಸಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಹಲವು ಅಧಿಕಾರಿಗಳಿದ್ದರು.

error: Content is protected !!