
ಕುಣಿಗಲ್: ಮಗನನ್ನು ಶಾಲೆಗೆ ಸೇರಿಸಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ನೆಲಕ್ಕುರುಳಿದ ಪರಿಣಾಮ ತಾಯಿ ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ಬಿ.ಎಂ ರಸ್ತೆ ಉರ್ಕೆಹಳ್ಳಿ ಬಳಿ ಇಂದು(ಮೇ 18) ಮಧ್ಯಾಹ್ನ ನಡೆದಿದೆ.

ರಾಯಚೂರು ಮೂಲದ ಜಯಮಾಲ, ರಾಜೇಶ್ವರಿ ಸ್ಥಳದಲ್ಲೇ ಮೃತಪಟ್ಟ ತಾಯಿ ಮಗಳು. ರಾಜೇಶ್ವರಿ ಅವರ ಮಗ ಪ್ರೀತಮ್ ಹಾಗೂ ತಮ್ಮ ಮಾರುತಿ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜೇಶ್ವರಿ ತನ್ನ ಮಗ ಪ್ರೀತಮ್ ನನ್ನು ಶ್ರವಣಬೆಳಗೋಳ ಸಮೀಪದ ಶಾಲೆಗೆ ಆರನೇ ತರಗತಿಗೆ ಅಡ್ಮಿಷನ್ ಮಾಡಿಸಲು ತುಮಕೂರಿನಿಂದ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.