ವಾಷಿಂಗ್ಟನ್ / ಅಬುಜಾ: ಜಾಗತಿಕ ಭಯೋತ್ಪಾದನೆಯ ಕ್ರೂರ ಮುಖ ಹಾಗೂ ಇಸಿಸ್ (ISIS) ಉಗ್ರ ಸಂಘಟನೆಯ ಅತ್ಯಂತ ಶಕ್ತಿಶಾಲಿ ನೆರಳು ಕೊನೆಗೂ ಸದ್ದಿಲ್ಲದೆ ಮಣ್ಣಾಗಿದೆ. ಜಗತ್ತಿನಾದ್ಯಂತ ಭೀತಿ ಸೃಷ್ಟಿಸುತ್ತಿದ್ದ ಇಸಿಸ್‌ನ ಜಾಗತಿಕ ನಂಬರ್ 2 ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಅಮೆರಿಕ ಮತ್ತು ನೈಜೀರಿಯಾ ಸಶಸ್ತ್ರ ಪಡೆಗಳ ಅತ್ಯಂತ ರಹಸ್ಯ ಹಾಗೂ ಸೂಕ್ಷ್ಮ ಜಂಟಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದಾನೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ಈ ಹೈ-ಪ್ರೊಫೈಲ್ ಹತ್ಯೆಯನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ಇಡೀ ವಿಶ್ವದಲ್ಲೇ ಭಾರಿ ಸಂಚಲನ ಮೂಡಿಸಿದ್ದಾರೆ.

“ನನ್ನ ನೇರ ನಿರ್ದೇಶನದ ಮೇರೆಗೆ ಧೈರ್ಯಶಾಲಿ ಅಮೆರಿಕಾದ ಸೇನಾ ಪಡೆಗಳು ಮತ್ತು ನೈಜೀರಿಯಾ ಸಶಸ್ತ್ರ ಪಡೆಗಳು ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮವಾಗಿ ರೂಪಿಸಲಾದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿವೆ” ಎಂದು ಟ್ರಂಪ್ ಘೋಷಿಸಿದ್ದಾರೆ. 2023ರಲ್ಲೇ ಅಮೆರಿಕದಿಂದ ʻಜಾಗತಿಕ ಉಗ್ರʼ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಅಲ್-ಮಿನುಕಿ, ಆಫ್ರಿಕಾದ ಸಾಹೆಲ್ ಪ್ರದೇಶದಲ್ಲಿ ಅಡಗಿ ಕುಳಿತು ಇಸಿಸ್‌ನ ಜಾಗತಿಕ ಕಾರ್ಯಾಚರಣೆಗಳಿಗೆ ಹಣಕಾಸು ಹಾಗೂ ನೆರವು ಒದಗಿಸುತ್ತಿದ್ದ. ಆಫ್ರಿಕಾದ ದಟ್ಟ ಕಾಡುಗಳ ಮಧ್ಯೆ ಆತ ಅಡಗಿದ್ದರೂ, ಅಮೆರಿಕಾದ ಗೂಢಚಾರ ಪಡೆಗಳು ಆತನ ಪ್ರತಿಯೊಂದು ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದವು.

ಈ ಕಾರ್ಯಾಚರಣೆಯನ್ನು ಎಷ್ಟು ರಹಸ್ಯವಾಗಿಡಲಾಗಿದೆ ಎಂದರೆ, ಅಲ್-ಮಿನುಕಿ ನಿಖರವಾಗಿ ಯಾವ ಪ್ರದೇಶದಲ್ಲಿ ಹತ್ಯೆಯಾಗಿದ್ದಾನೆ ಅಥವಾ ಇದು ವಾಯುದಾಳಿಯೇ (Airstrike) ಅಥವಾ ಮುಖಾಮುಖಿ ಕಮಾಂಡೋ ಫೈಟೇ ಎಂಬ ರಹಸ್ಯ ವಿವರಗಳನ್ನು ಅಮೆರಿಕ ಅಧ್ಯಕ್ಷರು ಬಹಿರಂಗಪಡಿಸಿಲ್ಲ. ಕಳೆದ ಕ್ರಿಸ್‌ಮಸ್ ದಿನದಂದು ಉತ್ತರ ಪಶ್ಚಿಮ ಸೋಕೊಟೊ ರಾಜ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಇನ್ ದಿ ಸಾಹೇಲ್ ಸಂಘಟನೆಯ (ISSP) ವಿರುದ್ಧ ಅಮೆರಿಕ ಮತ್ತು ನೈಜೀರಿಯಾ ಜಂಟಿ ವಾಯುದಾಳಿ ನಡೆಸಿದ್ದವು. ಅಂದಿನಿಂದ ನೂರಾರು ಅಮೆರಿಕನ್ ಸೈನಿಕರು ನೈಜೀರಿಯಾ ಪಡೆಗಳಿಗೆ ತರಬೇತಿ ನೀಡುತ್ತಾ ಈ ಬೇಟೆಯಲ್ಲಿ ತೊಡಗಿದ್ದರು.

ಅಲ್-ಮಿನುಕಿ ಹತ್ಯೆಯಿಂದ ಇಸಿಸ್‌ನ ಜಾಗತಿಕ ಕಾರ್ಯಾಚರಣೆಗೆ ಚೇತರಿಸಿಕೊಳ್ಳಲಾಗದ ದೊಡ್ಡ ಹೊಡೆತ ಬಿದ್ದಿದೆ. ಇನ್ನು ಮುಂದೆ ಆತ ಆಫ್ರಿಕಾ ಜನರನ್ನು ಭೀತಿಗೊಳಿಸಲು ಅಥವಾ ಅಮೆರಿಕನ್ನರ ವಿರುದ್ಧದ ದಾಳಿಗಳಿಗೆ ಆರ್ಥಿಕ ನೆರವು ನೀಡಲು ಜೀವಂತವಾಗಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ನೈಜೀರಿಯಾದಲ್ಲಿ ಹಲವು ವರ್ಷಗಳಿಂದ ಇಸಿಸ್, ಬೊಕೊ ಹರಾಮ್ (Boko Haram) ಹಾಗೂ ಬಂಡುಕೋರರ ವಿರುದ್ಧ ನಡೆಯುತ್ತಿದ್ದ ಹೋರಾಟಕ್ಕೆ ಈ ಜಂಟಿ ಆಪರೇಷನ್ ಅತ್ಯಂತ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ.
