ಬೆಳಗಾವಿ: ಯಾರ ಕಣ್ಣಿಗೂ ಬೀಳದೆ, ಸದ್ದಿಲ್ಲದೇ ನೂರಾರು ಕೋಟಿ ರೂಪಾಯಿಗಳ ಹೂಡಿಕೆ ಸಾಮ್ರಾಜ್ಯ ಕಟ್ಟಿದ್ದ ಆತ, ಒಂದು ದಿನ ಸಾರ್ವಜನಿಕ ವೇದಿಕೆಯಲ್ಲಿ ಅಬ್ಬರಿಸಿದ್ದ. “ನನ್ನ ಬಳಿ 15 ಸಾವಿರ ಬಂದೂಕುಗಳಿವೆ, ನನ್ಯಾರಿಗೂ ಹೆದರಲ್ಲ” ಎಂದು ಸವಾಲು ಹಾಕಿದ್ದ. ಆದರೆ, ಅದೇ ವೇದಿಕೆಯಲ್ಲಿ ಆಡಿದ ಅತಿರೇಕದ ಮಾತುಗಳು ಮತ್ತು ನಗರದಾದ್ಯಂತ ರಾರಾಜಿಸಿದ ಕಟೌಟ್‌ಗಳೇ ಈಗ ಆತನ ಪತನಕ್ಕೆ ಮುನ್ನುಡಿ ಬರೆದಿವೆ! ನಿಯಮ ಬಾಹಿರವಾಗಿ ಸಾರ್ವಜನಿಕರಿಂದ ಠೇವಣಿ ಪಡೆದ ಆರೋಪದ ಮೇಲೆ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ಈಗ ಪೊಲೀಸರ ವಶದಲ್ಲಿದ್ದಾನೆ.

ಉಪವಿಭಾಗಾಧಿಕಾರಿ (AC) ಮತ್ತು ಸಹಕಾರ ಇಲಾಖೆಯ ಜಂಟಿ ಅಧಿಕಾರಿಗಳ ತಂಡ ಗುರುವಾರ ಮಧ್ಯಾಹ್ನ ಶಿವಂ ಅಸೋಸಿಯೇಟ್ಸ್ ಕಚೇರಿ ಮೇಲೆ ದಾಳಿ ಇಟ್ಟಾಗ ಇಡೀ ಬೆಳಗಾವಿ ನಗರವೇ ಬೆಚ್ಚಿಬಿದ್ದಿತ್ತು. ಈ ತನಿಖಾ ಕಾರ್ಯಾಚರಣೆ ಅಂತಿಮಗೊಂಡಿದ್ದು ಬರೋಬ್ಬರಿ 20 ಗಂಟೆಗಳ ನಿರಂತರ ಶೋಧದ ಬಳಿಕ, ಅಂದರೆ ಶುಕ್ರವಾರ ಮಧ್ಯಾಹ್ನ! ತನಿಖಾಧಿಕಾರಿಗಳು ಶಿವಾನಂದನ ಕಚೇರಿ, ಮನೆ ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಜಾಲಾಡಿದ್ದು, ಹಣದ ವಹಿವಾಟಿಗೆ ಸಂಬಂಧಿಸಿದ ನೂರಾರು ರಹಸ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆತನ ಕಚೇರಿ ಮತ್ತು ಮನೆಗೆ ಸೀಲ್ (Seize) ಹಾಕಲಾಗಿದ್ದು, ಶಿವಬಸವ ನಗರದ ನಿವಾಸದಲ್ಲೇ ಆತನನ್ನು ವಶಕ್ಕೆ ಪಡೆಯಲಾಗಿದೆ.

ಆಟೋದಲ್ಲಿ ಐಸ್‌ಕ್ರೀಮ್ ಮಾರುತ್ತಿದ್ದವನು ನೂರಾರು ಕೋಟಿಯ ಒಡೆಯನಾಗಿದ್ದು ಹೇಗೆ?
“ಅತಿ ಆಸೆ ಮತ್ತು ಅತಿಯಾದ ಪ್ರಚಾರವೇ ಜಾಣನಿಗೂ ಕಂಟಕ ತರುತ್ತದೆ. ಶಿವಾನಂದನ ಇತಿಹಾಸ ಕೆದಕಿದಾಗ ಅಚ್ಚರಿಯ ಸಂಗತಿಗಳು ಹೊರಬಿದ್ದಿವೆ. ಮೂಲತಃ ಹುಬ್ಬಳ್ಳಿಯ ಉಣಕಲ್‌ನವನಾದ ಶಿವಾನಂದ, ಬೆಳಗಾವಿಗೆ ಬಂದು ನೆಲೆಸಿದ್ದ. ಕೇವಲ ದ್ವಿತೀಯ ಪಿಯುಸಿ ಓದಿದ್ದ ಈತ ಆರಂಭದಲ್ಲಿ ಮೆಡಿಕಲ್ ಕಾಲೇಜೊಂದರಲ್ಲಿ ಸಿಪಾಯಿ (Peon) ಕೆಲಸ ಮಾಡಿದ್ದ! 2004ರಿಂದ 2006ರ ತನಕ ಆಟೋದಲ್ಲಿ ಫ್ರಿಜ್ ಇಟ್ಟುಕೊಂಡು ಐಸ್‌ಕ್ರೀಮ್ ಮಾರುತ್ತಿದ್ದ. ಆದರೆ 2012ರಲ್ಲಿ ಶೇರು ಮಾರುಕಟ್ಟೆಯಲ್ಲಿ ಕೈ ಸುಟ್ಟುಕೊಂಡಿದ್ದ. ಕೊನೆಗೆ ತಾನೇ ಏಕೆ ಹೂಡಿಕೆ ಸಂಸ್ಥೆ ಆರಂಭಿಸಬಾರದು ಎಂದು ಯೋಚಿಸಿ ʻಅಕ್ಯೂಮೆನ್’ (Acumen) ಎಂಬ ಆ್ಯಪ್ ಅಭಿವೃದ್ಧಿಪಡಿಸಿದ. ಈ ಆ್ಯಪ್ ಮೂಲಕವೇ ಜನರಿಂದ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡು ಬೃಹತ್ ಸಾಮ್ರಾಜ್ಯ ಕಟ್ಟಿದ್ದ.

ಸಾಮ್ರಾಜ್ಯ ಪತನಕ್ಕೆ ಕಾರಣವಾದ ಸ್ವಚ್ಛತಾ ಪ್ಲಾನ್!
ದಶಕಗಳಿಂದ ಸದ್ದಿಲ್ಲದೆ ವ್ಯವಹಾರ ನಡೆಸುತ್ತಿದ್ದ ಶಿವಾನಂದ ಇತ್ತೀಚೆಗೆ ಸಮಾಜಮುಖಿ ಕೆಲಸಗಳ ಮೂಲಕ ರಾಜ್ಯಮಟ್ಟದಲ್ಲಿ ಹೈಲೈಟ್ ಆಗಲು ಯತ್ನಿಸಿದ್ದ. ಮೇ 17ರಂದು ಬೆಳಗಾವಿಯಲ್ಲಿ ಬರೋಬ್ಬರಿ 20 ಸಾವಿರ ಜನರನ್ನು ಸೇರಿಸಿ ಸ್ವಚ್ಛತಾ ಕಾರ್ಯಕ್ರಮ ಮಾಡಲು ಮುಂದಾಗಿದ್ದ. ಆದರೆ, ಗುರುವಾರ ಬೆಳಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ನಗರದಲ್ಲಿದ್ದ ಆತನ ಎಲ್ಲಾ ಬ್ಯಾನರ್ ಮತ್ತು ಕಟೌಟ್‌ಗಳನ್ನು ತೆರವುಗೊಳಿಸಿದರು. ಮಧ್ಯಾಹ್ನದ ಹೊತ್ತಿಗೆ ತನಿಖಾ ತಂಡಗಳು ದಾಳಿ ಇಟ್ಟವು. ಸದ್ಯ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಶಿವಾನಂದ ನೀಲಣ್ಣವರ್ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದ್ದು, ಕಡೂರಿನ ಕಾರ್ಯಕ್ರಮದಲ್ಲಿ ಆಡಿದ ಬಂದೂಕು ಭಾಷಣವೇ ಆತನಿಗೆ ಮುಳುವಾಗಿದೆ!
