ಜೆಪ್ಪಿನಮೊಗರು ಹೆದ್ದಾರಿಯಲ್ಲಿ ಟ್ರಕ್ ತಡೆದ ಪೊಲೀಸರು: ಬಜರಂಗದಳದ ನೆರವಿನಿಂದ 27 ಜಾನುವಾರುಗಳ ರಕ್ಷಣೆ

ಮಂಗಳೂರು: ಹಿಂಸಾತ್ಮಕ ರೀತಿಯಲ್ಲಿ ಟ್ರಕ್‌ನಲ್ಲಿ ಕಟ್ಟಿ ಸಾಗಾಟ ಮಾಡಲಾಗುತ್ತಿದ್ದ ಬೃಹತ್ ಅಕ್ರಮ ಜಾನುವಾರು ಸಾಗಾಟ ಜಾಲವನ್ನು ಮಂಗಳೂರು ಪೊಲೀಸರು ಪತ್ತೆಹಚ್ಚಿದ್ದಾರೆ. ಬಜರಂಗದಳದ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, 27 ಜಾನುವಾರುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಜರಂಗದಳದ ಕಾರ್ಯಕರ್ತರಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯನ್ನು ಅವರು ತಕ್ಷಣ ಪೊಲೀಸರಿಗೆ ತಲುಪಿಸಿದ್ದರು. ಮಾಹಿತಿ ಹಿನ್ನೆಲೆಯಲ್ಲಿ ಅಲರ್ಟ್ ಆದ ಮಂಗಳೂರು ಪೊಲೀಸರು, ಮಂಗಳೂರಿನ ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಯುತ್ತ ನಿಂತು, ಶಂಕಿತ ಟ್ರಕ್ ಬರುತ್ತಿದ್ದಂತೆ ಅದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದರು.

ಪೊಲೀಸರು ಟ್ರಕ್ ಅನ್ನು ಪರಿಶೀಲಿಸಿದಾಗ, ಅದರೊಳಗೆ ಬರೋಬ್ಬರಿ 27 ಜಾನುವಾರುಗಳನ್ನು ಅತ್ಯಂತ ಕ್ರೂರ ಮತ್ತು ಹಿಂಸಾತ್ಮಕ ರೀತಿಯಲ್ಲಿ ಒಂದಕ್ಕೊಂದು ಕಟ್ಟಿ ಹಾಕಿರುವುದು ಕಂಡುಬಂದಿದೆ. ಈ ಜಾನುವಾರುಗಳನ್ನು ಹಾವೇರಿ ಜಿಲ್ಲೆಯಿಂದ ಮಂಗಳೂರು ಮಾರ್ಗವಾಗಿ ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂಬ ವಿಷಯ ತನಿಖೆಯಿಂದ ತಿಳಿದುಬಂದಿದೆ.

ಸ್ಥಳದಲ್ಲೇ ಜಾನುವಾರುಗಳನ್ನು ಹಿಂಸೆಯಿಂದ ಮುಕ್ತಗೊಳಿಸಿ ರಕ್ಷಿಸಿರುವ ಪೊಲೀಸರು, ಅಕ್ರಮ ಸಾಗಾಟದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಮಂಗಳೂರಿನ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!