ಬೆಂಗಳೂರಿನ ಹೈ-ಪ್ರೊಫೈಲ್ ‘ಜಿಲೆಟಿನ್’ ರಹಸ್ಯ ಭೇದಿಸಿದ ಖಾಕಿ ಪಡೆ!

ಬೆಂಗಳೂರು: ಅದು ಮೇ 10ರ ಮುಂಜಾನೆ. ಇಡೀ ಸಿಲಿಕಾನ್ ಸಿಟಿ ವಿವಿಐಪಿ ಭದ್ರತೆಯ ಕೋಟೆಯಾಗಿ ಮಾರ್ಪಟ್ಟಿತ್ತು. ಕಾರಣ, ಆರ್ಟ್ ಆಫ್ ಲೀವಿಂಗ್ ಆಶ್ರಮದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಜನ್ಮದಿನೋತ್ಸವ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಸಮಾರಂಭಕ್ಕೆ ಮುಖ್ಯ ಅತಿಥಿ. ಆದರೆ, ಪ್ರಧಾನಿ ಆಗಮನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಇಡೀ ಪೊಲೀಸ್ ಇಲಾಖೆಯನ್ನೇ ನಡುಗಿಸುವ ಆ ಒಂದು ಸುದ್ದಿ ಬಂದಿತ್ತು—ಆಶ್ರಮದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು! ಇಡೀ ದೇಶದಲ್ಲೇ ಭಾರಿ ಸಂಚಲನ ಮೂಡಿಸಿದ್ದ ಈ ಹೈ-ಪ್ರೊಫೈಲ್ ಪ್ರಕರಣದ ಅಸಲಿ ಸತ್ಯವನ್ನು ಭೇದಿಸಲು ಬೆಂಗಳೂರು ದಕ್ಷಿಣ ವಲಯದ ಪೊಲೀಸರು ತನಿಖಾ ಕಣಕ್ಕೆ ಇಳಿದಿದ್ದರು.

ಮೊದಲ ನೋಟಕ್ಕೆ ಇದು ಯಾವುದೇ ದೊಡ್ಡ ಉಗ್ರ ಸಂಘಟನೆಯ ಕೃತ್ಯ ಇರಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ, ಘಟನಾ ಸ್ಥಳಕ್ಕೆ ಧಾವಿಸಿದ ಪತ್ತೆದಾರಿ ಪಡೆಗಳಿಗೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರಿಗೆ ಒಂದು ಮುಖ್ಯ ಸುಳಿವು ಸಿಕ್ಕಿತು. ಪತ್ತೆಯಾದ ಜಿಲೆಟಿನ್ ಬಾಕ್ಸ್‌ನಲ್ಲಿ ಅತ್ಯಂತ ಮುಖ್ಯವಾದ ಡಿಟೋನೇಟರ್ ಇರಲಿಲ್ಲ! ಅಷ್ಟೇ ಅಲ್ಲ, ಒಂದು ವೇಳೆ ಯಾರಾದರೂ ಆ ಜಿಲೆಟಿನ್‌ಗೆ ಬೆಂಕಿ ಹಚ್ಚಿದ್ದರೂ ಅದು ಸ್ಫೋಟಗೊಳ್ಳುತ್ತಿರಲಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದರು. ಇದರರ್ಥ, ಆರೋಪಿಗಳ ಉದ್ದೇಶ ಬ್ಲಾಸ್ಟ್ ಮಾಡುವುದಾಗಿರಲಿಲ್ಲ; ಬದಲಿಗೆ ಭೀತಿ ಹುಟ್ಟಿಸುವುದಷ್ಟೇ ಆಗಿತ್ತು.

ಈ ಕೃತ್ಯದ ಹಿಂದೆ ಆಶ್ರಮದ ಮೇಲಿದ್ದ ವೈಯಕ್ತಿಕ ದ್ವೇಷ ಅಡಗಿದೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಗಳು ಅತ್ಯಂತ ಚಾಣಾಕ್ಷತನದಿಂದ ತನಿಖಾಧಿಕಾರಿಗಳಿಗೆ ಯಾವುದೇ ಸಿಸಿಟಿವಿ ದೃಶ್ಯಾವಳಿಗಳು ಸಿಗದಂತಹ ಸುರಕ್ಷಿತವಾದ ಜಾಗವನ್ನೇ ಆಯ್ದುಕೊಂಡಿದ್ದರು. ರಾತ್ರಿ 8 ಗಂಟೆಯಿಂದ ಮುಂಜಾನೆ 7 ಗಂಟೆಯ ಕತ್ತಲೆಯ ಅವಧಿಯಲ್ಲಿ ಈ ಜಿಲೆಟಿನ್ ಇಟ್ಟು ಪರಾರಿಯಾಗಿದ್ದರು. ರವಿಶಂಕರ್ ಗುರೂಜಿ ಅವರ ಪ್ರಭಾವವನ್ನು ಕುಗ್ಗಿಸುವುದು ಮತ್ತು ಪ್ರಧಾನಿ ಮೋದಿಯವರ ಭೇಟಿಯನ್ನು ರದ್ದುಗೊಳಿಸಿ ಆಶ್ರಮದ ಭದ್ರತೆಗೆ ಮಸಿ ಬಳಿಯುವುದೇ ಈ ಕಿಲಾಡಿ’ಳ ಮುಖ್ಯ ಉದ್ದೇಶವಾಗಿತ್ತು.

ಸಿಸಿಟಿವಿ ಇಲ್ಲದಿದ್ದರೇನಂತೆ? ಡಿಜಿಟಲ್ ತಂತ್ರಜ್ಞಾನದ ಮೂಲಕವೇ ಆರೋಪಿಗಳಿಗೆ ಪೊಲೀಸರು ಚೆಕ್‌ಮೇಟ್ ಇಟ್ಟಿದ್ದಾರೆ. ಘಟನೆ ನಡೆದ ಸಮಯದ ಮೊಬೈಲ್ ಟವರ್ ಲೋಕೇಶನ್ (Tower Location) ಮತ್ತು ಸುಧಾರಿತ ತಾಂತ್ರಿಕ ವಿಶ್ಲೇಷಣೆಯ (Technical Analysis) ಮೂಲಕ ತನಿಖಾ ತಂಡ ಈಗ ಆರೋಪಿಗಳ ಅಡಗುದಾಣದ ತುದಿಗೆ ಬಂದು ತಲುಪಿದೆ. ಪ್ರಧಾನಿ ಭದ್ರತೆಗೆ ಸವಾಲು ಹಾಕಿದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಇಡೀ ಸಂಚಿನ ಮಾಸ್ಟರ್‌ಮೈಂಡ್‌ಗಳ ಕೈಗೆ ಬೇಡಿ ಬೀಳುವುದು ನಿಶ್ಚಿತ ಎಂದು ಪೊಲೀಸರು ಖಡಕ್ ಆಗಿ ಹೇಳಿದ್ದಾರೆ.

error: Content is protected !!