ಕೋಟಿ ಕೋಟಿ ಬಂಗಾರ ಸಮವಸ್ತ್ರದಲ್ಲೇ ಅಡಗಿಸಿಟ್ಟು ಮಂಗಳೂರಿನ ಕಿಲಾಡಿ ಹರ್ಷಿದಾ ಶೆಟ್ಟಿ ಎಸ್ಕೇಪ್!: ಸಿಸಿಟಿವಿಯಲ್ಲಿ ಸೆರೆಯಾಯ್ತು ಬಂಗಾರಿಯ ಕೈಚಳಕ!

ಅಹಮದಾಬಾದ್: ಅಹಮದಾಬಾದ್ನ ಪ್ರತಿಷ್ಠಿತ ಆಭರಣ ಅಂಗಡಿಯೊಂದರಲ್ಲಿ ಸೇಲ್ಸ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದ ಮಂಗಳೂರು ಮೂಲದ ಮಹಿಳೆಯೋರ್ವರು ಸುಮಾರು 1.66 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ತನ್ನ ಸಮವಸ್ತ್ರದೊಳಗೆ ಅಡಗಿಸಿಟ್ಟುಕೊಂಡು ಅಂಗಡಿಯಿಂದ ಪರಾರಿಯಾಗಿರುವಂತಹ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಹರ್ಷಿದಾ ಶೆಟ್ಟಿ ಆರೋಪಿ ಮಹಿಳೆ.

ದೂರಿನ ಪ್ರಕಾರ, ಕಳೆದ 11 ತಿಂಗಳುಗಳಿಂದ ಅಂಗಡಿಯಲ್ಲಿ ಸೇಲ್ಸ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದಂತಹ ಹರ್ಷಿದಾ ಶೆಟ್ಟಿ ಸುಮಾರು 1.66 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ತಮ್ಮ ಸಮವಸ್ತ್ರದ ಒಳಗೆ ಅಡಗಿಸಿಟ್ಟುಕೊಂಡು ಪರಾರಿಯಾಗಿರುವ ಘಟನೆ ಸೋಮವಾರ (ಮೇ 11) ಮಧ್ಯಾಹ್ನ ಸುಮಾರು 4:30 ರ ವೇಳೆಗೆ ನಡೆದಿದೆ. ಈ ವೇಳೆ ಸಹದ್ಯೋಗಿಗಳಿಂದ ತಪ್ಪಿಸಿಕೊಳ್ಳಲು “ಮಾಲೀಕರು ತುರ್ತು ಕೆಲಸಕ್ಕೆ ರಜೆ ನೀಡಿದ್ದಾರೆ” ಎಂದು ತಿಳಿಸಿ, ಆಭರಣಗಳಿಂದ ತುಂಬಿದ ತಮ್ಮ ಸಮವಸ್ತ್ರ ಮತ್ತು ಬ್ಯಾಗ್ನೊಂದಿಗೆ ಅಂಗಡಿಯಿಂದ ಹೊರನಡೆದಿದ್ದಾರೆ.

ಸಂಜೆ ವೇಳೆ ಗ್ರಾಹಕರೊಬ್ಬರಿಗೆ ಚಿನ್ನ ತೋರಿಸುವ ಸಂದರ್ಭದಲ್ಲಿ ಪ್ರದರ್ಶನ ಪೆಟ್ಟಿಗೆಯಲ್ಲಿ ಚಿನ್ನದ ಬ್ರೇಸ್ಲೆಟ್ ಕಾಣೆಯಾಗಿರುವುದನ್ನು ಇತರ ನೌಕರರು ಗಮನಿಸಿದರು. ತಕ್ಷಣವೇ ತನಿಖೆ ಆರಂಭಿಸಿದ ಅಂಗಡಿಯ ಮಾಲೀಕರು ದರ್ಶನ್ ಬಾಯ್ ಅವರಿಗೆ, ಹರ್ಷಿದಾ ಅವರು ತಮ್ಮ ಅನುಮತಿಯಿಲ್ಲದೆ ಅಂಗಡಿ ತೊರೆದಿರುವುದು ತಿಳಿದುಬಂದಿದೆ. ಅನುಮಾನದ ಮೇರೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಹರ್ಷಿದಾ ತನ್ನ ಕೌಂಟರ್ ಹಿಂದಿನ ಪ್ರದರ್ಶನ ಪೆಟ್ಟಿಗೆಗಳಿಂದ ಎಚ್ಚರಿಕೆಯಿಂದ ಆಭರಣಗಳನ್ನು ಹೊರತೆಗೆದು, ತನ್ನ ಬಟ್ಟೆಯೊಳಗೆ ಮತ್ತು ಜೇಬುಗಳಲ್ಲಿ ತುಂಬಿಕೊಂಡು, ನಂತರ ಸ್ಟೋರ್ ರೂಂನಿಂದ ತನ್ನ ಬ್ಯಾಗ್ ಎತ್ತಿಕೊಂಡು ಹೊರಟ ದೃಶ್ಯ ಸ್ಪಷ್ಟವಾಗಿ ಕಂಡುಬಂದಿದೆ.

ಈ ಕುರಿತು ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ಹರ್ಷಿದಾ ಅವರ ಮೊಬೈಲ್ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ ಮತ್ತು ಇದುವರೆಗೂ ಅದು ಸ್ವಿಚ್ ಆಫ್ ಆಗಿದ್ದು, ಪೊಲೀಸರು ಆಕೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

error: Content is protected !!