ಮೂಡಬಿದ್ರೆ: ಪೊಲೀಸ್ ಬಲೆಗೆ ಬಿದ್ದ ಕುಖ್ಯಾತ ಗೋಕಳ್ಳರು!

ಮೂಡಬಿದ್ರೆ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದು ಬಂಧಿತರಿಂದ ಒಂದು ಮಾರುತಿ ಬ್ರೀಜಾ ಕಾರು ಹಾಗೂ ಗಂಡು ಕರುವನ್ನು ರಕ್ಷಿಸಲಾಗಿದೆ.
ಹಂಡೇಲು ನಿವಾಸಿ ಮಹಮ್ಮದ್ ಆರೀಪ್ ಮತ್ತು ಗಂಟಾಲಕಟ್ಟೆಯ ಇಮ್ರಾನ್ ಬಂಧಿತ ಆರೋಪಿಗಳು.
ಮೇ 14 ರಂದು ಬೆಳಿಗ್ಗೆ ಮೂಡಬಿದ್ರೆ ಪಿ.ಎಸ್.ಐ ಕೃಷ್ಣಪ್ಪ ಮತ್ತು ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಮಾರುತಿ ಬ್ರೀಜಾ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ವಾಹನ ತಪಾಸಣೆ ನಡೆಸಲು ಸಜ್ಜಾದ ವೇಳೆ ಅನುಮಾನಾಸ್ಪದವಾಗಿ ಬಂದ ಬೂದು ಬಣ್ಣದ ಮಾರುತಿ ಬ್ರೀಜಾ ಕಾರನ್ನು ನಿಲ್ಲಿಸಲು ಪೊಲೀಸರು ಸೂಚನೆ ನೀಡಿದರು. ಆದರೆ ಚಾಲಕ ಕಾರನ್ನು ನಿಲ್ಲಿಸದೇ ವೇಗವಾಗಿ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ. ಕೂಡಲೇ ಪೊಲೀಸರು ವಾಹನವನ್ನು ಬೆನ್ನಟ್ಟಿದಾಗ, ಆರೋಪಿಗಳು ಗುಂಡುಕಲ್ಲು 5 ಸೈಂಟ್ಸ್ ರಸ್ತೆಯಲ್ಲಿದ್ದ ಸಾಹುಲ್ ಹಮೀದ್ ಎಂಬುವರ ಮನೆ ಕಂಪೌಂಡ್ ಒಳಗೆ ಕಾರನ್ನು ನುಗ್ಗಿಸಿ ಓಡಿಹೋಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಂಡೇಲಿನ ಮಹಮ್ಮದ್ ಆರೀಪ್ ಮತ್ತು ಗಂಟಾಲಕಟ್ಟೆಯ ಇಮ್ರಾನ್ ಎಂಬುವವರನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಕಾರಿನ ಹಿಂಬದಿ ಸೀಟನ್ನು ತೆಗೆದು, ಅದರ ಮೇಲೆ ನೀಲಿ ಬಣ್ಣದ ಪ್ಲಾಸ್ಟಿಕ್ ಹಾಸಿ, ಒಂದು ಗಂಡು ಕರುವಿನ ಕಾಲು ಮತ್ತು ತಲೆಯನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ತುಂಬಿಸಲಾಗಿತ್ತು. ಕಳೆದ ಒಂದು ವಾರದಿಂದ ಬೇರೆ ಬೇರೆ ಕಡೆಗಳಿಂದ ದನಗಳನ್ನು ಕಳ್ಳತನ ಮಾಡಿ ತಂದು, ಸಾಹುಲ್ ಹಮೀದ್ ಎಂಬುವರ ಮನೆಯ ಬಳಿ ಕಡಿದು ಮಾಂಸ ಮಾರಾಟ ಮಾಡಲು ಇದನ್ನು ಸಂಗ್ರಹಿಸಲಾಗಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

error: Content is protected !!