ನವದೆಹಲಿ: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ ಸರಸ್ವತಿ ಮಂದಿರ ಮತ್ತು ಕಮಲ್ ಮೌಲಾ ಮಸೀದಿ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಇಡೀ ಸಂಕೀರ್ಣವು ವಾಗ್ದೇವಿ (ಸರಸ್ವತಿ ದೇವಿಯ) ಮಂದಿರವಾಗಿದೆ ಎಂದು ಘೋಷಿಸಿರುವ ನ್ಯಾಯಾಲಯ, ಮುಸ್ಲಿಮರಿಗೆ ಶುಕ್ರವಾರದ ನಮಾಜ್ ಮಾಡಲು ಅವಕಾಶ ನೀಡಿದ್ದ 2003ರ ಪುರಾತತ್ವ ಇಲಾಖೆಯ (ASI) ಆದೇಶವನ್ನು ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ತಿ ಅವರಿದ್ದ ಹೈಕೋರ್ಟ್ ಪೀಠವು ಈ ಆದೇಶವನ್ನು ಹೊರಡಿಸಿದೆ. ಭೋಜಶಾಲಾ ಸಂಕೀರ್ಣದ ಸಂಪೂರ್ಣ ನಿರ್ವಹಣೆ ಮತ್ತು ಉಸ್ತುವಾರಿ ಭಾರತೀಯ ಪುರಾತತ್ವ ಇಲಾಖೆಯ (ASI) ಅಡಿಯಲ್ಲೇ ಇರಲಿದೆಯಾದರೂ, ಅಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಸಂಪೂರ್ಣ ಹಕ್ಕು ಹಿಂದೂಗಳದ್ದಾಗಿರಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದೇ ವೇಳೆ, ಮುಸ್ಲಿಂ ಸಮುದಾಯದವರು ಮಸೀದಿ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿ ಪರ್ಯಾಯ ಭೂಮಿಯನ್ನು ನೀಡುವಂತೆ ರಾಜ್ಯ ಸರ್ಕಾರವನ್ನು ಸಂಪರ್ಕಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

“ಈ ಸ್ಥಳದಲ್ಲಿ ಹಿಂದೂಗಳ ಪೂಜಾ ನಿರಂತರತೆಯು ಎಂದಿಗೂ ಕೊನೆಗೊಂಡಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ. ಐತಿಹಾಸಿಕ ದಾಖಲೆಗಳ ಪ್ರಕಾರ, ವಿವಾದಿತ ಪ್ರದೇಶವು ಪರಮಾರ ರಾಜವಂಶದ ರಾಜ ಭೋಜನ ಕಾಲದ ಪ್ರಸಿದ್ಧ ಸಂಸ್ಕೃತ ಕಲಿಕಾ ಕೇಂದ್ರ ಮತ್ತು ಸರಸ್ವತಿ ಮಂದಿರವಾಗಿತ್ತು ಎಂಬುದು ಸಾಬೀತಾಗಿದೆ” ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಇತಿಹಾಸದ ಪ್ರಕಾರ, ಕ್ರಿಸ್ತಶಕ 1010 ರಿಂದ 1055 ರ ನಡುವೆ ರಾಜ ಭೋಜನು ಇದನ್ನು ಜ್ಞಾನದ ಕೇಂದ್ರವಾಗಿ ನಿರ್ಮಿಸಿದ್ದನು.
ಪ್ರಮುಖ ಅಂಶ: 2003ರ ನಿಯಮದ ಪ್ರಕಾರ, ಈ ಸಂಕೀರ್ಣದಲ್ಲಿ ಹಿಂದೂಗಳಿಗೆ ಮಂಗಳವಾರ ಪೂಜೆ ಮಾಡಲು ಮತ್ತು ಮುಸ್ಲಿಮರಿಗೆ ಶುಕ್ರವಾರ ನಮಾಜ್ ಮಾಡಲು ಎಎಸ್‌ಐ ಅವಕಾಶ ಕಲ್ಪಿಸಿತ್ತು. ಇದನ್ನು ವಿರೋಧಿಸಿ ಹಿಂದೂ ಪಕ್ಷವು ತಮಗೇ ಸಂಪೂರ್ಣ ಹಕ್ಕು ನೀಡಬೇಕೆಂದು ಕೋರ್ಟ್ ಮೆಟ್ಟಿಲೇರಿತ್ತು.

ಲಂಡನ್‌ನಿಂದ ಸರಸ್ವತಿ ದೇವಿಯ ವಿಗ್ರಹ ತರಲು ಸೂಚನೆ
ಭೋಜಶಾಲಾ ಮಂದಿರದಲ್ಲಿದ್ದ ಸರಸ್ವತಿ ದೇವಿಯ ಮೂಲ ವಿಗ್ರಹವು ಪ್ರಸ್ತುತ ಲಂಡನ್‌ನ ಬ್ರಿಟಿಷ್ ಮ್ಯೂಸಿಯಂನಲ್ಲಿದೆ. ಈ ಅಪರೂಪದ ಮತ್ತು ಐತಿಹಾಸಿಕ ವಿಗ್ರಹವನ್ನು ಭಾರತಕ್ಕೆ ವಾಪಸ್ ತಂದು, ಮತ್ತೆ ಭೋಜಶಾಲಾ ಸಂಕೀರ್ಣದಲ್ಲೇ ಪ್ರತಿಷ್ಠಾಪಿಸಲು ಅಗತ್ಯವಿರುವ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಕುರಿತು ಸಲ್ಲಿಕೆಯಾಗಿರುವ ಮನವಿಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ತಿಳಿಸಿದೆ.

2000 ಪುಟಗಳ ಎಎಸ್‌ಐ ವರದಿ ಮತ್ತು ಮುಸ್ಲಿಂ ಪಕ್ಷದ ಆಕ್ಷೇಪ
ಹೈಕೋರ್ಟ್ ಆದೇಶದ ಮೇರೆಗೆ 2024 ರಲ್ಲಿ ಎಎಸ್‌ಐ ತಂಡವು ಭೋಜಶಾಲಾ ಸಂಕೀರ್ಣದಲ್ಲಿ ಭೀಕರ 98 ದಿನಗಳ ಕಾಲ ವೈಜ್ಞಾನಿಕ ಸಮೀಕ್ಷೆ ನಡೆಸಿ, 2,000 ಕ್ಕೂ ಹೆಚ್ಚು ಪುಟಗಳ ವರದಿಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿ, ಪ್ರಸ್ತುತ ಇರುವ ಮಸೀದಿಗಿಂತ ಮುಂಚೆಯೇ ಅಲ್ಲಿ ಒಂದು ದೈತ್ಯ ಹಿಂದೂ ರಾಜರ ಕಾಲದ ರಚನೆ ಇತ್ತು ಮತ್ತು ಮಂದಿರದ ಕಂಬ ಹಾಗೂ ಸಾಮಗ್ರಿಗಳನ್ನು ಬಳಸಿಯೇ ಇಂದಿನ ಕಟ್ಟಡವನ್ನು ಮರುನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಮುಸ್ಲಿಂ ಪಕ್ಷವು ಈ ವರದಿಯು ಏಕಪಕ್ಷೀಯವಾಗಿದೆ ಎಂದು ನ್ಯಾಯಾಲಯದಲ್ಲಿ ವಾದಿಸಿತ್ತು. ಸದ್ಯ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಈ ಪ್ರಕರಣ ಸುಪ್ರೀಂ ಕೋರ್ಟ್ ತಲುಪುವ ಸಾಧ್ಯತೆ ದಟ್ಟವಾಗಿದೆ.