ನವದೆಹಲಿ: ವಿಶ್ವದ ಅತ್ಯಂತ ದೊಡ್ಡ ರಹಸ್ಯ ಹಾಗೂ ಆತಂಕದ ಕೇಂದ್ರ ಬಿಂದುವಾಗಿದ್ದ ‘ಬರ್ಮುಡಾ ಟ್ರಯಾಂಗಲ್’ (Bermuda Triangle) ಕುರಿತಾದ ವಿಸ್ಮಯಗಳಿಗೆ ಕೊನೆಗೂ ವಿಜ್ಞಾನಿಗಳು ಉತ್ತರ ಹುಡುಕಿದ್ದಾರೆ. ಈ ಭಾಗದಲ್ಲಿ ಹಾದುಹೋಗುವ ದೈತ್ಯ ಹಡಗುಗಳು ದಿಢೀರ್ ಮಾಯವಾಗುವುದು ಹಾಗೂ ಆಕಾಶದಲ್ಲಿ ಹಾರಾಡುವ ವಿಮಾನಗಳು ನಾಪತ್ತೆಯಾಗುವ ಹಿಂದಿರುವ ಅಸಲಿ ರಹಸ್ಯವನ್ನು ಜಗತ್ತಿನ ಖ್ಯಾತ ಸಂಶೋಧಕರು ಬಹಿರಂಗಪಡಿಸಿದ್ದಾರೆ.

ಮೆರಿಕಾದ ಕಾರ್ನೆಗಿ ಸೈನ್ಸ್ ಸಂಸ್ಥೆಯ ಭೂಕಂಪಶಾಸ್ತ್ರಜ್ಞ ವಿಲಿಯಂ ಫ್ರೇಜರ್ ಮತ್ತು ಯೇಲ್ ವಿಶ್ವವಿದ್ಯಾಲಯದ ಜೆಫ್ರಿ ಪಾರ್ಕ್ ನೇತೃತ್ವದ ವಿಜ್ಞಾನಿಗಳ ತಂಡ, ಬರ್ಮುಡಾ ದ್ವೀಪದ ತಳಭಾಗದಲ್ಲಿ ಜಗತ್ತಿನ ಬೇರೆಲ್ಲೂ ಕಂಡುಬರದ ವಿಚಿತ್ರ ಭೌಗೋಳಿಕ ರಚನೆಯನ್ನು ಪತ್ತೆಹಚ್ಚಿದ್ದಾರೆ. ಈ ರಹಸ್ಯದ ಮೂಲ ಹುಡುಕಲು ಸಂಶೋಧಕರು ಬರೋಬ್ಬರಿ ಸಾಗರದ ತಳಭಾಗದಿಂದ 400 ಕಿಲೋಮೀಟರ್ ಆಳದವರೆಗೆ ಇಳಿದು ಭೌಗೋಳಿಕ ಅಧ್ಯಯನ ನಡೆಸಿದ್ದಾರೆ. ಈ ವೇಳೆ ದ್ವೀಪದ ತಳಭಾಗದಲ್ಲಿರುವ ಕರಗಿದ ಶಿಲೆಗಳ ವಿಶಿಷ್ಟ ಪದರದ ವಿಚಿತ್ರ ರಚನೆಯೇ ಇಲ್ಲಿ ನಡೆಯುವ ಎಲ್ಲಾ ಅಸಹಜ ಘಟನೆಗಳಿಗೆ ಕಾರಣ ಎಂಬುದು ಪತ್ತೆಯಾಗಿದೆ.
)
ವಿಜ್ಞಾನಿಗಳ ಪ್ರಕಾರ, ಸುಮಾರು 30 ಮಿಲಿಯನ್ (3 ಕೋಟಿ) ವರ್ಷಗಳ ಹಿಂದೆ ಸಂಭವಿಸಿದ ಭೀಕರ ಜ್ವಾಲಾಮುಖಿ ಸ್ಫೋಟದಿಂದಾಗಿ ಈ ದ್ವೀಪ ಪ್ರದೇಶವು ರಚನೆಯಾಗಿದೆ. ಈ ದ್ವೀಪದ ಅಡಿಯಲ್ಲಿ ಬರೋಬ್ಬರಿ 20 ಕಿಲೋಮೀಟರ್ ದಪ್ಪದ ದೈತ್ಯ ಶಿಲಾ ಪದರವಿದೆ. ಇಂತಹ ವಿಶಿಷ್ಟ ಭೂಗರ್ಭ ರಚನೆಯು ಭೂಮಿಯ ಇನ್ಯಾವ ಭಾಗದಲ್ಲೂ ಕಂಡುಬಂದಿಲ್ಲ. ಜ್ವಾಲಾಮುಖಿಯಿಂದ ಸೃಷ್ಟಿಯಾಗುವ ದ್ವೀಪಗಳು ಕಾಲಕ್ರಮೇಣ ಸಮುದ್ರದಲ್ಲಿ ಮುಳುಗುತ್ತವೆ, ಆದರೆ ಬರ್ಮುಡಾ ಟ್ರಯಾಂಗಲ್ ಯಾವುದೇ ಹಾನಿಯಿಲ್ಲದೆ ಗಟ್ಟಿಯಾಗಿ ನಿಲ್ಲಲು ಇಲ್ಲಿನ ಕ್ರಸ್ಟ್ ಹಾಗೂ ಮ್ಯಾಂಟಲ್ ನಡುವೆ ಇರುವ ಈ ವಿಶೇಷ ಶಿಲಾಪದರವೇ ಕಾರಣವಾಗಿದೆ.
ಈ ಹಗುರವಾದ ಕಲ್ಲಿನ ಪದರವೇ ಒಂದು ದೈತ್ಯ ‘ದೋಣಿ’ ಅಥವಾ ‘ವೆರಗಿನಂತೆ’ (Raft) ಕೆಲಸ ಮಾಡುತ್ತಿದ್ದು, ಇಡೀ ಬರ್ಮುಡಾ ದ್ವೀಪವನ್ನು ಸಮುದ್ರದಲ್ಲಿ ಮುಳುಗದಂತೆ ಮೇಲಕ್ಕೆ ಹಿಡಿದಿಟ್ಟಿದೆ!

ವಿಜ್ಞಾನಿಗಳ ಪ್ರಕಾರ, ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯ ಮೇಲಿನ ಎಲ್ಲಾ ಖಂಡಗಳೂ ಒಂದಾಗಿದ್ದ ‘ಪಾಂಜಿಯಾ’ (Pangea) ಕಾಲದಲ್ಲಿ, ಕಾರ್ಬನ್ ಅಂಶದಿಂದ ಸಮೃದ್ಧವಾಗಿದ್ದ ಕರಗಿದ ಲಾವಾರಸವು ಭೂಮಿಯ ಹೊರಪದರದ ಅಡಿಯಲ್ಲಿ ಬಂದು ತಣ್ಣಗಾಗಿ ಈ ವಿಶಿಷ್ಟ ಬಂಡೆಯು ಸೃಷ್ಟಿಯಾಗಿದೆ. ಜಗತ್ತಿನ ಬೇರೆ ಯಾವುದೇ ದ್ವೀಪದ ಅಡಿಯಲ್ಲೂ ಇಂತಹ ವಿಲಕ್ಷಣ ಮತ್ತು ಹಗುರವಾದ ಬಂಡೆಯ ರಚನೆ ಕಂಡುಬಂದಿಲ್ಲ.
ಬರ್ಮುಡಾದ ಈ ಹೊಸ ಆವಿಷ್ಕಾರವು ಭೂಮಿಯ ಒಳಭಾಗದ ಚಲನೆಗಳ ಬಗ್ಗೆ ವಿಜ್ಞಾನಿಗಳು ಇದುವರೆಗೆ ಬರೆದಿದ್ದ ಪಠ್ಯಪುಸ್ತಕಗಳನ್ನೇ ಬದಲಾಯಿಸುವಂತೆ ಮಾಡಿದೆ. ಸದ್ಯಕ್ಕೆ ವಿಜ್ಞಾನಿ ವಿಲಿಯಂ ಫ್ರೇಜರ್ ಅವರು ಜಗತ್ತಿನ ಬೇರೆ ದ್ವೀಪಗಳ ಅಡಿಯಲ್ಲೂ ಇಂತಹ ರಹಸ್ಯ ಅಡಗಿದೆಯೇ ಎಂದು ಹುಡುಕಲು ಹೊರಟಿದ್ದಾರೆ.

ಈ ವಿಶಿಷ್ಟ ಭೂಗರ್ಭ ರಚನೆಗಳಿಂದಾಗಿ ಬರ್ಮುಡಾ ಟ್ರಯಾಂಗಲ್ ವಲಯದಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ವಿಶೇಷ ರೀತಿಯ ಕಾಂತೀಯ ವಲಯ (Magnetic Field) ಸೃಷ್ಟಿಯಾಗಿದೆ. ಇಲ್ಲಿನ ವಿಚಿತ್ರ ಹವಾಮಾನ ಮತ್ತು ಭೀಕರ ಕಾಂತೀಯ ಸೆಳೆತದ ಪರಿಣಾಮವಾಗಿ, ಈ ಭಾಗದಲ್ಲಿ ಚಲಿಸುವ ಹಡಗುಗಳು ಮತ್ತು ಆಕಾಶದಲ್ಲಿ ಹಾರುವ ವಿಮಾನಗಳ ದಿಕ್ಸೂಚಿ ಯಂತ್ರಗಳು (Compass) ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ದಿಕ್ಸೂಚಿಗಳು ದಿಕ್ಕು ತಪ್ಪುವುದರಿಂದ ಹಡಗು ಮತ್ತು ವಿಮಾನಗಳು ನಿಯಂತ್ರಣ ಕಳೆದುಕೊಂಡು ಭೀಕರ ಅಪಘಾತಕ್ಕೀಡಾಗಿ ಸಮುದ್ರದ ಗರ್ಭ ಸೇರುತ್ತಿವೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವರ್ಷಗಳಿಂದ ಕಾಡುತ್ತಿದ್ದ ಜಗತ್ತಿನ ಬಿಗ್ಗೆಸ್ಟ್ ಮಿಸ್ಟರಿಯೊಂದು ಬಟಾಬಯಲಾಗಿದೆ.
