ಮಂಗಳೂರು: ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ನಿಯಮಿತದ ವತಿಯಿಂದ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಮೇ 17 ಮತ್ತು 18 ರಂದು ಎರಡು ದಿನಗಳ ಕಾಲ ರಾಜ್ಯ ಮಟ್ಟದ ‘ಗೇರು ಮೇಳ’ ಜರುಗಲಿದೆ ಎಂದು ಗೇರು ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್. ಗಟ್ಟಿ ಅವರು ತಮ್ಮ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೇ 17ರ ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಸ್ಪೀಕರ್ ಯು.ಟಿ. ಖಾದರ್ ಫರೀದ್ ಅವರು ಗೇರು ಮೇಳವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ್ ಬಿ. ಖಂಡ್ರೆ ನೆರವೇರಿಸಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜ್ಯಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಗೇರು ಮೇಳದ ನಿಗಮ ಮಂಡಳಿಯ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಮತಾ ನುಡಿದರು.

ಮೇ 17 ಮತ್ತು 18 ರಂದು ಗೇರು ಕೃಷಿಯ ಕುರಿತು ತಾಂತ್ರಿಕ ಕಾರ್ಯಾಗಾರಗಳು ನಡೆಯಲಿವೆ. ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದ (DCR) ಪ್ರಧಾನ ವಿಜ್ಞಾನಿ ಡಾ. ಜಿ. ದಿನಕರ ಉಳ್ಳಾಳ್ ಮತ್ತು ಹಿರಿಯ ವಿಜ್ಞಾನಿ ಡಾ. ವೀಣಾ ಜಿ.ಎಲ್. ಅವರು ಆಧುನಿಕ ತಂತ್ರಜ್ಞಾನಗಳು, ಗೇರು ಸಂಸ್ಕರಣೆ ಮತ್ತು ಮೌಲ್ಯ ವರ್ಧನೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಪ್ರಗತಿಪರ ರೈತ ಸುಭಾಷ್ ರೈ ಅವರು ಗೇರು ಕೃಷಿಯ ಕುರಿತು ತಮ್ಮ ವೈಯಕ್ತಿಕ ಅನುಭವ ಹಂಚಿಕೊಳ್ಳಲಿದ್ದಾರೆ.
ಎರಡನೇ ದಿನವಾದ ಮೇ 18 ರಂದು ನಡೆಯುವ ತಾಂತ್ರಿಕ ಅಧಿವೇಶನದಲ್ಲಿ ಕೆಸಿಎಂಡಿ ಮಾಜಿ ಅಧ್ಯಕ್ಷ ಪ್ರಕಾಶ್ ಕಲ್ಬಾವಿ “ರಾಜ್ಯ ಮಟ್ಟದ ‘ಗೇರು ಮೇಳ’” ವಿಷಯ ಮಂಡನೆ ಮಾಡಲಿದ್ದಾರೆ. ಹುಬ್ಬಳ್ಳಿಯ ಗೇರು ಮತ್ತು ಕೋಕೋ ನಿರ್ದೇಶನಾಲಯದ ಮಾಜಿ ನಿರ್ದೇಶಕ ಡಾ. ವೆಂಕಟೇಶ್ ಎನ್. ಹುಬ್ಬಳ್ಳಿ ಮತ್ತು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಯೋಜಕ ಡಾ. ಸಿ. ಸುನಿಲ್ ಯೋಜನೆಗಳು ಹಾಗೂ ನರ್ಸರಿಗಳ ಮಾನ್ಯತೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಗೇರು ಬೆಳೆಯ ಮೂಲಕ ಗಮನಾರ್ಹ ಸಾಧನೆ ಮಾಡಿದ ಪ್ರಗತಿಪರ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದು ಮಮತಾ ಗಟ್ಟಿ ನುಡಿದರು.

ಸಾರ್ವಜನಿಕರಿಗೆ ಮತ್ತು ರೈತರಿಗೆ ಮೇಳದಲ್ಲಿ ಉಚಿತ ಪ್ರವೇಶವಿದ್ದು, ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಒದಗಿಸಲು 70ಕ್ಕೂ ಹೆಚ್ಚು ಉಚಿತ ಮಾರಾಟ ಮಳಿಗೆಗಳ ವ್ಯವಸ್ಥೆ ಇರಲಿದೆ. ವಿದ್ಯಾರ್ಥಿಗಳಿಗಾಗಿ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆ ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಉಚಿತವಾಗಿ ಗೇರು ಹಣ್ಣಿನ ಜ್ಯೂಸ್ ವಿತರಿಸಲಾಗುತ್ತದೆ ಎಂದರು.

ಮೇ 17ರಂದು ಸಂಜೆ 7.00 ಗಂಟೆಗೆ ದೇವದಾಸ್ ಕಾಪಿಕಾಡ್ ತಂಡದಿಂದ ಪ್ರಸಿದ್ಧ ತುಳು ನಾಟಕ ʻನಮಸ್ಕಾರ ಮಾಸ್ಟರ್’ ಪ್ರದರ್ಶನಗೊಳ್ಳಲಿದ್ದು, ಮೇ 18ರಂದು ಮಧ್ಯಾಹ್ನ 2.00 ಗಂಟೆಗೆ ʻಇಂಚರ ಮೆಲೋಡೀಸ್’ ತಂಡದಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಉಭಯ ಜಿಲ್ಲೆಗಳ ಸಾರ್ವಜನಿಕರು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಗೇರು ಮೇಳದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಗೇರು ನಿಗಮದ ಅಧ್ಯಕ್ಷೆ ಮಮತಾ ವಿನಂತಿಸಿದ್ದಾರೆ.