ಬೆಂಗಳೂರು: ಬೇಸಿಗೆಯ ಬಿಸಿಲಿನ ಬೇಗೆಯಿಂದ ಬೆಂದು ಹೋಗಿದ್ದ ರಾಜ್ಯದ ಬಿಯರ್ ಪ್ರಿಯರಿಗೆ ಅಬಕಾರಿ ಇಲಾಖೆಯು ಕೊನೆಗೂ ತಂಪು ತಂಪಾದ ಸಿಹಿ ಸುದ್ದಿ ನೀಡಿದೆ! ಸರ್ಕಾರ ಜಾರಿಗೆ ತಂದಿರುವ ನೂತನ ಅಬಕಾರಿ ನೀತಿಯಿಂದಾಗಿ ಪ್ರೀಮಿಯಂ ಬಿಯರ್‌ಗಳ ಬೆಲೆಯಲ್ಲಿ ಶೇ. 20 ರಿಂದ 25 ರಷ್ಟು ಗಣನೀಯ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಬ್ರಾಂಡೆಡ್ ಬಿಯರ್‌ಗಳ ಬೆಲೆ ದಿಢೀರನೆ ಕಮ್ಮಿಯಾಗಿರುವುದರಿಂದ, ವೀಕೆಂಡ್ ಪಾರ್ಟಿ ಮೂಡ್‌ನಲ್ಲಿದ್ದ ಯುವಕರ ಪಾಕೆಟ್‌ಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಹೊಸ ನೀತಿಯ ಪ್ರಕಾರ, ಶೇ. 5 ರಷ್ಟು ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಬೆಲೆ ಕೇಳಿದರೆ ನೀವೇ ಶಾಕ್ ಆಗ್ತೀರಾ. ಸದಾ ಡಿಮ್ಯಾಂಡ್‌ನಲ್ಲಿರುವ ಕಿಂಗ್‌ಫಿಶರ್ ಪ್ರೀಮಿಯಂ ಮತ್ತು ಅಲ್ಟ್ರಾದ 650 ಎಂಎಲ್ ದೊಡ್ಡ ಬಾಟಲಿಗಳ ಬೆಲೆಯಲ್ಲಿ ಬರೋಬ್ಬರಿ 75 ರೂಪಾಯಿ ಕಡಿತಗೊಳಿಸಲಾಗಿದೆ! ಇನ್ನು ಹೈನೆಕೆನ್ ಮೇಲೆ 70 ರೂ., ಯುಬಿ ಎಕ್ಸ್‌ಪೋರ್ಟ್ ಮೇಲೆ 25 ರೂ. ಹಾಗೂ ಬಡ್‌ವೈಸರ್ ಪ್ರೀಮಿಯಂ ಮೇಲೆ 20 ರೂ. ರಿಯಾಯಿತಿ ಸಿಕ್ಕಿದೆ. ಇಷ್ಟು ದಿನ ಬಾರ್‌ಗಳಲ್ಲಿ ಬಿಲ್ ನೋಡಿ ಬೆಚ್ಚಿಬೀಳುತ್ತಿದ್ದ ಗ್ರಾಹಕರು, ಈಗ “ಇನ್ನೊಂದು ರೌಂಡ್ ಆರ್ಡರ್ ಮಾಡಿ” ಎಂದು ಖುಷಿಯಿಂದ ಕೌಂಟರ್ ಕಡೆ ಮುಖ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ʻಆಲ್ಕೋಹಾಲ್ ಇನ್ ಬೆವರೇಜ್’ (AiB) ಎನ್ನುವ ಹೊಸ ನೀತಿಯನ್ನು ತಂದಿದ್ದೇ ಈ ಎಲ್ಲಾ ಬದಲಾವಣೆಗೆ ಕಾರಣ. ಕಳೆದ 60 ವರ್ಷಗಳಿಂದ ಇದ್ದ ಹಳೆಯ ತೆರಿಗೆ ಪದ್ಧತಿಯನ್ನು ಕೈಬಿಟ್ಟು, ಮದ್ಯದಲ್ಲಿರುವ ಆಲ್ಕೋಹಾಲ್ ಅಂಶದ ಆಧಾರದ ಮೇಲೆ ತೆರಿಗೆ ಹಾಕಲು ನಿರ್ಧರಿಸಲಾಗಿದೆ. ಬಿಯರ್‌ನಲ್ಲಿ ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುವುದರಿಂದ ಅದಕ್ಕೆ ತೆರಿಗೆಯೂ ಕಮ್ಮಿಯಾಗಿದೆ. ಇದರಿಂದಾಗಿ ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯೂ ಸಾವಿರ ರೂಪಾಯಿಯಷ್ಟು ಇಳಿದಿದ್ದು, ಹೈ-ಫೈ ಕ್ಲಾಸ್ ಮಂದಿಗೂ ಲಾಟರಿ ಹೊಡೆದಿದೆ.

ಬಡವರ ಕ್ವಾರ್ಟರ್‌ಗೆ ಬಿತ್ತು ಕತ್ತರಿ!
ಆದರೆ, ಈ ಕಥೆಯಲ್ಲಿ ಒಂದು ಸಣ್ಣ ಟ್ವಿಸ್ಟ್ ಇದೆ. ಬಿಯರ್ ಮತ್ತು ವಿದೇಶಿ ಸ್ಕಾಚ್ ಬೆಲೆಯನ್ನು ಕಮ್ಮಿ ಮಾಡಿರುವ ಸರ್ಕಾರ, ಮತ್ತೊಂದೆಡೆ ಸಾಮಾನ್ಯ ಜನರು ಕುಡಿಯುವ ಕಡಿಮೆ ದರದ ಮದ್ಯದ (ಲೋಕಲ್ ಬ್ರಾಂಡ್) ಬೆಲೆಯನ್ನು ಏರಿಕೆ ಮಾಡಿದೆ. ಇದರಿಂದಾಗಿ “ಶ್ರೀಮಂತರು ಕುಡಿಯುವ ಬಿಯರ್, ಸ್ಕಾಚ್ ಅಗ್ಗ ಮಾಡಿ, ನಮ್ಮ ಗಂಟಲು ಒಣಗಿಸಿದ್ರಲ್ಲಪ್ಪಾ” ಎಂದು ಬಡ ಮದ್ಯಪ್ರಿಯರು ಅಬಕಾರಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಏನೇ ಆಗಲಿ, ಸದ್ಯಕ್ಕಂತೂ ಬಿಯರ್ ಪ್ರಿಯರು ಮಾತ್ರ ಸರ್ಕಾರದ ಹೊಸ ನೀತಿಯನ್ನು “ಚಿಯರ್ಸ್” ಎಂದು ಜೈಕಾರ ಹಾಕಿ ಸ್ವಾಗತಿಸುತ್ತಿದ್ದಾರೆ!
