ಸಿದ್ದರಾಮಯ್ಯ ಸಮರ್ಥನೆ, ಎಸ್‌ಡಿಪಿಐ ಸ್ವಾಗತ, ಶಾಸಕ ಯಶ್‌ಪಾಲ್‌ ಎಚ್ಚರಿಕೆ: ಹಿಜಾಬ್ ನಿರ್ಧಾರದಿಂದ ರಾಜ್ಯದಲ್ಲಿ ಮಗದೊಮ್ಮೆ ಸಮವಸ್ತ್ರ ಸಮರ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡಿದ್ದು, ನಾವು ಕೇವಲ ಹಿಜಾಬ್‌ಗೆ ಮಾತ್ರವಲ್ಲದೆ ಜನಿವಾರ, ಶಿವದಾರ, ರುದ್ರಾಕ್ಷಿ ಮತ್ತು ಪೇಟಗಳಿಗೂ ಅವಕಾಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ, ಶಾಲೆಗಳಿಗೆ ಕೇಸರಿ ಶಾಲು ಅಥವಾ ಕೇಸರಿ ಪೇಟ ಧರಿಸಿ ಬರುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೊದಲಿನಿಂದ ಬಳಕೆಯಲ್ಲಿದ್ದ ಪೇಟಗಳಿಗೆ ಮಾತ್ರ ಅವಕಾಶವಿದ್ದು, ಈಗ ಹೊಸದಾಗಿ ಬಣ್ಣ ಬದಲಾವಣೆ ಮಾಡಿಕೊಂಡ ಪೇಟಗಳಿಗೆ ಅನುಮತಿ ಇಲ್ಲ ಎಂದು ಮೈಸೂರಿನಲ್ಲಿ ಸಿಎಂ ವಿವರಿಸಿದ್ದಾರೆ.

ಎಸ್‌ಡಿಪಿಐ ಸಂಘಟನೆಯಿಂದ ನಿರ್ಧಾರಕ್ಕೆ ಸ್ವಾಗತ
ಸರ್ಕಾರದ ಈ ಕ್ರಮವನ್ನು ಎಸ್‌ಡಿಪಿಐ ಮುಖಂಡ ಮೊಹಮ್ಮದ್ ಅಶ್ರಫ್ ಸ್ವಾಗತಿಸಿದ್ದು, ಈ ಹಿಂದಿನ ಸರ್ಕಾರವು ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿನಿಯರ ಭವಿಷ್ಯದ ಜೊತೆ ಚೆಲ್ಲಾಟವಾಡಿತ್ತು ಎಂದು ಆರೋಪಿಸಿದ್ದಾರೆ. ಉಡುಪಿ ಜಿಲ್ಲೆಯ ಮಾಜಿ ಮತ್ತು ಹಾಲಿ ಶಾಸಕರು ಈ ವಿವಾದವನ್ನು ಆರಂಭಿಸಿದ್ದರು ಮತ್ತು ಇದು ಅನಗತ್ಯವಾಗಿ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರವು ಈ ಆದೇಶವನ್ನು ಮೊದಲೇ ಹಿಂಪಡೆಯಬೇಕಿತ್ತು ಎಂದು ಅವರು ತಿಳಿಸಿದ್ದಾರೆ.

ಶಾಸಕ ಯಶ್‌ಪಾಲ್ ಸುವರ್ಣ ಅವರಿಂದ ಹೋರಾಟದ ಎಚ್ಚರಿಕೆ
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ ಸರ್ಕಾರ ಮಗದೊಮ್ಮೆ ‘ಜೇನುಗೂಡಿಗೆ ಕೈ ಹಾಕಿದೆ’ ಎಂದು ಕಿಡಿಕಾರಿದ್ದಾರೆ. ಸರ್ಕಾರವು ಮಮತಾ ಬ್ಯಾನರ್ಜಿ ಮಾದರಿಯಲ್ಲಿ ಕರ್ನಾಟಕವನ್ನು ಮಾಡಲು ಹೊರಟಿದೆ ಮತ್ತು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಅವರು ದೂರಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವಾಗ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿರುವ ಅವರು, ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಮತ್ತು ಮುಂದಿನ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದ್ದಾರೆ.

ವಿಪಕ್ಷಗಳ ಆಕ್ರೋಶ ಮತ್ತು ಹಿನ್ನೆಲೆ
ಕಾಂಗ್ರೆಸ್ ಸರ್ಕಾರವು ಒಂದು ಸಮುದಾಯದ ಓಲೈಕೆಗಾಗಿ ಕೋರ್ಟ್ ಆದೇಶವನ್ನು ಗಾಳಿಗೆ ತೂರಿದೆ ಎಂದು ವಿಪಕ್ಷಗಳು ಮುಗಿಬಿದ್ದಿವೆ. 2022ರಲ್ಲಿ ಅಂದಿನ ಸರ್ಕಾರ ಜಾರಿಗೆ ತಂದಿದ್ದ ವಸ್ತ್ರಸಂಹಿತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು ಎಂಬುದನ್ನು ನೆನಪಿಸಿರುವ ವಿಪಕ್ಷಗಳು, ಪ್ರಸಕ್ತ ಸರ್ಕಾರದ ಈ ನಡೆಯು ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

error: Content is protected !!