ಕಾಂಗ್ರೆಸ್ ಸರ್ಕಾರದ ಹಿಜಾಬ್ ನಿಲುವು ಒಡೆದು ಆಳುವ ನೀತಿ: ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ಶೈಕ್ಷಣಿಕ ಕೇಂದ್ರಗಳಲ್ಲಿ ಸಮಾನತೆ ಮತ್ತು ಮಕ್ಕಳಲ್ಲಿ ಏಕತೆ ತರುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಶಿಸ್ತುಬದ್ಧ ಸಮವಸ್ತ್ರ ನಿಯಮವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ. ಈ ಮೂಲಕ ರಾಜ್ಯ ಸರ್ಕಾರವು ಶಾಲಾ-ಕಾಲೇಜುಗಳ ಶೈಕ್ಷಣಿಕ ವಾತಾವರಣವನ್ನು ಹಾಳುಗೆಡವಲು ಮುಂದಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಹೇಳಿಕೆ ನೀಡಿದ ಅವರು, ಸಮವಸ್ತ್ರದ ಮೂಲ ಉದ್ದೇಶವು ವಿದ್ಯಾರ್ಥಿಗಳಲ್ಲಿ ಜಾತಿ, ಮತ ಮತ್ತು ಭೇದ ಮರೆಸಿ ಸಮಾನತೆಯ ಭಾವ ಮೂಡಿಸುವುದಾಗಿದೆ. ಆದರೆ ಈ ಹಿಂದೆ ಉಂಟಾಗಿದ್ದ ಹಿಜಾಬ್ ವಿವಾದವು ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವಾಗಲೇ, ನ್ಯಾಯಾಂಗ ಪ್ರಕ್ರಿಯೆಯನ್ನು ಕಡೆಗಣಿಸಿ ನಿಷೇಧ ಹಿಂಪಡೆದಿರುವುದು ನ್ಯಾಯಾಂಗ ನಿಂದನೆಯಾಗಿದೆ ಎಂದು ಅವರು ದೂರಿದರು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ದೇಶದ ಸಮಗ್ರತೆ ಹಾಗೂ ಸಂವಿಧಾನವನ್ನು ಧಿಕ್ಕರಿಸುತ್ತಿದೆ ಎಂದು ಅವರು ಟೀಕಿಸಿದರು.

ಹಿಜಾಬ್‌ಗೆ ಅವಕಾಶ ನೀಡಿ, ಕೇಸರಿ ಶಾಲ್‌ಗೆ ಅವಕಾಶ ನೀಡುವುದಿಲ್ಲ ಎಂಬ ಸರ್ಕಾರದ ಹೇಳಿಕೆಯು ‘ತುಘಲಕ್ ಮಾದರಿಯ ಆಡಳಿತ’ವನ್ನು ಸಾಬೀತುಪಡಿಸಿದೆ ಎಂದು ಕಾಮತ್ ಕಿಡಿಕಾರಿದರು. ರಾಜ್ಯದಲ್ಲಿ ಶಿಕ್ಷಕರ ಕೊರತೆ ಮತ್ತು ಸರ್ಕಾರಿ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಅಲಭ್ಯತೆಯಂತಹ ಪ್ರಮುಖ ವಿಷಯಗಳನ್ನು ಗಮನಿಸದ ಸರ್ಕಾರ, ವಿದ್ಯಾರ್ಥಿಗಳಲ್ಲಿ ಪ್ರತ್ಯೇಕತೆ ಮೂಡಿಸುವ ಕೃತ್ಯಕ್ಕೆ ಕೈಹಾಕಿದೆ ಎಂದು ಅವರು ಆರೋಪಿಸಿದರು.

ಇಂತಹ ಮಿತಿ ಮೀರಿದ ಓಲೈಕೆ ರಾಜಕಾರಣದಿಂದಲೇ ದೇಶದೆಲ್ಲೆಡೆ ಕಾಂಗ್ರೆಸ್ ಧೂಳೀಪಟವಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಈ ಸರ್ಕಾರ ಕಸದ ಬುಟ್ಟಿ ಸೇರಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಎಚ್ಚರಿಸಿದರು.

error: Content is protected !!