ಸಿಟಿ ಸೆಂಟರ್‌ನಲ್ಲಿ ಮೇ 15ರಿಂದ ಮೂರು ದಿನಗಳ ʻವಿಂಟೇಜ್ ವೈಬ್ಸ್’ ವಸ್ತು ಪ್ರದರ್ಶನ

ಮಂಗಳೂರು: ಮಂಗಳೂರಿನ ಸಿಟಿ ಸೆಂಟರ್ ಮಾಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಫಿಲಾಟೆಲಿಕ್ಸ್ ಮತ್ತು ನುಮಿಸ್ಮ್ಯಾಟಿಕ್ಸ್ ಅಸೋಸಿಯೇಶನ್ ಸಹಯೋಗದಲ್ಲಿ “ವಿಂಟೇಜ್ ವೈಬ್ಸ್” ಎಂಬ ವಿಶಿಷ್ಟ ಪುರಾತನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನವು ಮೇ 15ರಿಂದ 17ರವರೆಗೆ ಮೂರು ದಿನಗಳ ಕಾಲ ಸಿಟಿ ಸೆಂಟರ್ ಮಾಲ್‌ನ ನೆಲ ಅಂತಸ್ತಿನಲ್ಲಿ ನಡೆಯಲಿದೆ ಎಂದು ಆಯೋಜಕ ಕಿರಣ್ ಶೈಣೈ ಅವರು ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, “ನಮಸ್ಕಾರ ಮಂಗಳೂರು” ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಈ ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಲಭ್ಯವಿರುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಪ್ರದರ್ಶನಕ್ಕೆ ಯಾವುದೇ ಪ್ರವೇಶ ದರವಿಲ್ಲದೆ ಉಚಿತವಾಗಿ ಕಲ್ಪಿಸಲಾಗಿದೆ ಎಂದರು.

ಈ ವಸ್ತು ಪ್ರದರ್ಶನದಲ್ಲಿ ಪುರಾತನ ನಾಣ್ಯಗಳು, ಹಳೆಯ ಕಾಲದ ಕರೆನ್ಸಿ ನೋಟುಗಳು, ಅಪರೂಪದ ಅಂಚೆ ಚೀಟಿಗಳು, ಪುರಾತನ ಗಡಿಯಾರಗಳು ಮತ್ತು ವಸ್ತು ಶಿಲ್ಪಗಳು ಸೇರಿದಂತೆ ಅನೇಕ ಐತಿಹಾಸಿಕ ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ. ಮುಖ್ಯವಾಗಿ ಬ್ರಿಟಿಷ್ ಇಂಡಿಯಾ ಕಾಲದ ನಾಣ್ಯಗಳು ಹಾಗೂ ತಾಮ್ರ, ನಿಕ್ಕೆಲ್, ಬ್ರಾಸ್ ಸೇರಿದಂತೆ ವಿವಿಧ ಲೋಹಗಳ ಅಪರೂಪದ ನಾಣ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ನಾಗರಿಕರಿಗೆ ದೊರೆಯಲಿದೆ.


ಗತಕಾಲದ ವಿಸ್ಮಯಗಳನ್ನು ಹತ್ತಿರದಿಂದ ನೋಡುವ ಈ ಅವಕಾಶವು ಎಲ್ಲ ವಯೋಮಾನದವರಿಗೂ ವಿಶೇಷ ಅನುಭವ ನೀಡಲಿದೆ. ವಿಶೇಷವಾಗಿ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕಂಡಿದ್ದ ವಸ್ತುಗಳನ್ನು ನೇರವಾಗಿ ನೋಡಲು ಮತ್ತು ಅವುಗಳ ಮಹತ್ವವನ್ನು ತಿಳಿದುಕೊಳ್ಳಲು ಇದು ಉತ್ತಮ ವೇದಿಕೆಯಾಗಲಿದೆ ಎಂದು ಕಿರಣ್ ಶೈಣೈ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂತೋಷ್ ಪ್ರಭು, ರಿಷಿತಾ, ವೈಶಾಲಿ, ವೆಂಕಟೇಶ್ ಪ್ರಭು ಹಾಗೂ ಬೈಕಾಡಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.

error: Content is protected !!