ರೇಮಂಡ್ ತಾಕೋಡೆ ಅವರ ʻಚುನ್ಯಾಚೊ ಫೊಂಡ್’ ಕವನ ಸಂಕಲನ ಲೋಕಾರ್ಪಣೆ

ಮುಂದಿನ ಐದು ವರ್ಷಗಳಲ್ಲಿ 100 ಕೊಂಕಣಿ ಪುಸ್ತಕ ಪ್ರಕಟಿಸುವ ಗುರಿ: ಮೈಕಲ್ ಡಿಸೋಜಾ
ಮಂಗಳೂರು: ಖ್ಯಾತ ಪತ್ರಕರ್ತ, ಸಾಹಿತಿ ರೇಮಂಡ್ ಡಿಕುನ್ಹಾ ತಾಕೋಡೆ ಅವರು ಬರೆದಿರುವ, ಕನ್ನಡ ಮತ್ತು ದೇವನಾಗರಿ ಲಿಪಿಯಲ್ಲಿರುವ ಕೊಂಕಣಿ ಕವನಗಳ ಸಂಕಲನ ʻಚುನ್ಯಾಚೊ ಫೊಂಡ್’ ಪುಸ್ತಕದ ಬಿಡುಗಡೆ ಸಮಾರಂಭವು ಇಂದು ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು. ಈ ಕೃತಿಯನ್ನು ʻಮೈಕಲ್ ಡಿಸೋಜಾ ವಿಷನ್ ಕೊಂಕಣಿʼ ಇದರ ಸಂಸ್ಥಾಪಕ, ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜ ಸೇವಕರಾದ ಮೈಕಲ್ ಡಿಸೋಜಾ ಬಿಡುಗಡೆಗೊಳಿಸಿದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮೈಕಲ್‌ ಡಿಸೋಜಾ, ʻಮೈಕಲ್ ಡಿಸೋಜಾ ವಿಷನ್ ಕೊಂಕಣಿʼ ಸಂಸ್ಥೆಯ ಮುಖಾಂತರ ಮಾತೃಭಾಷೆಯಲ್ಲಿ ಕೃತಿ ಪ್ರಕಟಿಸುವ ಬರೆಹಗಾರರ ಪುಸ್ತಕವನ್ನು ಮುದ್ರಣ ಮಾಡಲು ಸಹಾಯ ಮಾಡುತ್ತಿದ್ದೇನೆ. ಈಗ ಬಿಡುಗಡೆಗೊಂಡಿರುವ ಪುಸ್ತಕ ಸಂಸ್ಥೆಯ 42ನೇ ಪುಸ್ತಕವಾಗಿದೆ. ಮುಂದಿನ ಐದು ವರ್ಷಗಳಲ್ಲಿ 100 ಪುಸ್ತಕಗಳನ್ನು ಹೊರತರುವ ಗುರಿ ಹೊಂದಲಾಗಿದೆ. ಕೃತಿ ರಚಿಸಿ ಮುದ್ರಿಸಲು ಅನುದಾನದ ಕೊರತೆ ಎದುರಿಸುತ್ತಿರುವ ಕೃತಿಕಾರರಿಗೆ ಸಹಾಯ ಮಾಡಲು ʻಮೈಕಲ್ ಡಿಸೋಜಾ ವಿಷನ್ ಕೊಂಕಣಿʼ ಸಹಾಯ ಮಾಡುತ್ತಿದೆ ಎಂದರು.

ಗೌರವಾನ್ವಿತ ಅತಿಥಿಗಳಾಗಿದ್ದ ವಿಷನ್‌ ಕೊಂಕಣಿ ಮುಖ್ಯಸ್ಥ ಮುಖ್ಯಸ್ಥ ಹೆಚ್.ಎಂ. ಪೆರ್ನಾಲ್(ಹೆನ್ರಿ ಮೆಂಡೋನ್ಸಾ) ಮಾತನಾಡಿ, ಮೈಕಲ್‌ ಡಿಸೋಜ ಅವರು ʻಮೈಕಲ್ ಡಿಸೋಜಾ ವಿಷನ್ ಕೊಂಕಣಿ ಮೂಲಕ ಸಾಹಿತಿಗಳಿಗೆ ಸಹಾಯ ಮಾಡುತ್ತಿದ್ದಾರೆ. ನಲ್ವತ್ತು ಲಕ್ಷಕ್ಕೂ ಮಿಕ್ಕಿದ ನೆರವಿನ ಪಂಚವಾರ್ಷಿಕ ಯೋಜನೆ ಇದಾಗಿದೆ. ನಮ್ಮಲ್ಲಿ ಪುಸ್ತಕ ಪ್ರಕಟಿಸುವವರು ಪುಸ್ತಕದ ಕರಡು ಪ್ರತಿ ಹಾಗೂ ಪಿಡಿಎಫ್‌ ಪ್ರತಿಯನ್ನು ಕಳುಹಿಸಿದರೆ ಆಯ್ಕೆ ಸಮಿತಿ ವತಿಯಿಂದ ಪರಾಮರ್ಷಿಸಿ ಪುಸ್ತಕ ಮುದ್ರಿಸಿಕೊಡಲಾಗುತ್ತದೆ. vissionkonkani@gmail.comಗೆ ಪಿಡಿಎಫ್‌ ಕಳಿಸಬಹುದು ಅಥಚಾ ರಾಹುಲ್‌ ಎಡ್ವೆರ್ಟೈಸ್‌ಮೆಂಟ್‌ ಕಚೇರಿಗೆ ಕರಡು ಪ್ರತಿಯನ್ನು ಸಲ್ಲಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ, ಜಗತ್ತಿನ ಅತ್ಯಂತ ಸಮೃದ್ಧವಾದ ಭಾಷೆ ಮೌನ. ಕಲೆಗೆ ಸಾಹಿತ್ಯಕ್ಕೆ ಎಲ್ಲ ಭಾಷೆಯನ್ನು ಮೀರಿಸುವ ತಾಕತ್ತಿದೆ. ಆ ನೆಲೆಯಲ್ಲಿ ಮೈಕಲ್ ಡಿಸೋಜಾ ಕೆಲಸ‌ ಮಡುತ್ತಿದ್ದಾರೆ. ವ್ಯಕ್ತಿಗೆ ಸಾವಾಗಬಹುದು, ಆದರೆ ಕೃತಿಗೆ ಸಾವಿಲ್ಲ. ಪತ್ರಕರ್ತ ಮಿತ್ರ ರೇಮಂಡ್‌ ಅವರು ಕೃತಿ ತಂದಿರುವುದು ನಮ್ಮ ಪತ್ರಿಕೋದ್ಯಮ ಕುಟುಂಬದವರಿಗೆ ಹೆಮ್ಮೆಯ ವಿಚಾರ ಎಂದರು.

ಅತಿಥಿಗಳನ್ನು ಸ್ವಾಗತಿಸುತ್ತಾ ರೇಮಂಡ್‌ ಡಿಕುನಾ ತಾಕೊಡೆ, ಪತ್ರಿಕಾರಂಗ ಅಂದ್ರೆ ರಿಟೈರ್ ಮೆಂಟ್ ಇಲ್ಲದ ಕ್ಷೇತ್ರ. ನಾವು ಪೆನ್ನು ಮಾತ್ರ ಕೆಳಗಿಡಬಾರದು ನಿರಂತರವಾಗಿ ಬರೆಯುತ್ತಲೇ ಇರಬೇಕು. ಹೀಗಾಗಿ ಪತ್ರಿಕಾರಾಂಗದ ಹಿರಿಕಿರಿಯ ಮಿತ್ರರ ಸಹಕಾರದಿಂದ 60ರ ವಯಸ್ಸಿನಲ್ಲೂ ಬರೆಯುತ್ತ ಇದ್ದೇನೆ. ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು. ಮೈಕಲ್‌ ಡಿಸೋಜಾ ಅವರು ಈ ಪುಸ್ತಕ ಬಿಡುಗಡೆಗೆ ನೆರವಾಗಿದ್ದು, ಅವರ ಸಹಾಯ ಹಸ್ತ ಚಾಚುವ ಗುಣ ನಿಜಕ್ಕೂ ಮೆಚ್ಚುವಂಥದ್ದು. ಅವರು ದಾನ ಮಾಡುವುದಷ್ಟೇ ಅಲ್ಲದೆ ಆ ದಾನ ಸರಿಯಾದ ರೀತಿ ಬಳಕೆಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದರಲ್ಲದೆ, ಈ ಪುಸ್ತಕವನ್ನು ಗೋವಾದಲ್ಲೂ ಬಿಡುಗಡೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮೈಕಲ್‌ ಡಿಸೋಜಾರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಂಸ್ಥೆಯ ಪ್ರಮುಖರಾದ ಮೆಲ್ವಿನ್ ರೊಡ್ರಿಗಸ್, ಟೈಟಸ್ ನೊರೊನ್ಹಾ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ರಾಜೇಶ್ ಪೂಜಾರಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಭಾಸ್ಕರ ರೈ ಕಟ್ಟ ನಿರೂಪಿಸಿದರು. ಕೃತಿಕಾರ ರೇಮಂಡ್‌ ಡಿಕುನ್ಹಾರ ಪುತ್ರಿ, ಯುವ ಪತ್ರಕರ್ತೆ ರಿಯಾನಾ ಡಿಕುನ್ಹಾ ಧನ್ಯವಾದ ಸಲ್ಲಿಸಿದರು.

error: Content is protected !!