ಸ್ಪೀಕರ್ ಯು.ಟಿ. ಖಾದರ್ ಬೆಂಗಾವಲು ಪಡೆಗೆ ಮುತ್ತಿಗೆ: ಗನ್ ಮ್ಯಾನ್ ತಳ್ಳಿದ ಜುನೈದ್ ಅಂಡ್ ಟೀಮ್ ವಿರುದ್ಧ ಬಿತ್ತು ಎಫ್‌ಐಆರ್!

ಮಂಗಳೂರು: ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ಬೆಂಗಾವಲು ಪಡೆಯನ್ನು ತಡೆದು ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಒಟ್ಟು 11 ಜನರ ವಿರುದ್ಧ ಮಂಗಳೂರು ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ. ಮೇ 7 ರಂದು ಉಳ್ಳಾಲದ ಕುತ್ತಾರ್ ಬಾಪುನಿ ಸರ್ಕಾರಿ ಅತಿಥಿ ಗೃಹದ ಬಳಿ ಈ ಘಟನೆ ನಡೆದಿತ್ತು.

ನಡೆದಿದ್ದೇನು?
ಮೇ 7 ರಂದು ರಾತ್ರಿ 10:30ರ ಸುಮಾರಿಗೆ ಸ್ಪೀಕರ್ ಖಾದರ್ ಅವರು ಉಳ್ಳಾಲದಲ್ಲಿ ನಡೆದ ಕಾರ್ಯಕ್ರಮವೊಂದನ್ನು ಮುಗಿಸಿ ತಮ್ಮ ಬೆಂಗಾವಲು ಪಡೆಯಲ್ಲಿ ಮರಳುತ್ತಿದ್ದರು. ಈ ವೇಳೆ ಮದನಿ ನಗರದ ನಿವಾಸಿ ಜುನೈದ್ ನೇತೃತ್ವದ ಪ್ರತಿಭಟನಾಕಾರರ ಗುಂಪೊಂದು ಕುತ್ತಾರ್ ಬಳಿ ಬೆಂಗಾವಲು ಪಡೆಯನ್ನು ಅಡ್ಡಗಟ್ಟಿದೆ. ಸ್ಪೀಕರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಅವರೊಂದಿಗೆ ಮಾತುಕತೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದು ಭದ್ರತಾ ಅಧಿಕಾರಿಗಳನ್ನು ತಳ್ಳಾಟ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಪೀಕರ್ ಅವರ ಭದ್ರತಾ ಅಧಿಕಾರಿ (ಗನ್ ಮ್ಯಾನ್) ಮೊಹಮ್ಮದ್ ಯಾಸೀನ್ ಅವರು ನೀಡಿದ ದೂರಿನ ಆಧಾರದ ಮೇಲೆ ಉಳ್ಳಾಲ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. “ರಾತ್ರಿ ಸಮಯವಾಗಿದ್ದರಿಂದ ಸ್ಪೀಕರ್ ಅವರನ್ನು ಭೇಟಿ ಮಾಡಲು ಅವಕಾಶ ನೀಡದಿದ್ದಾಗ, ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯನ್ನು ಕೈಯಿಂದ ತಳ್ಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಿಸಿದರು” ಎಂದು ಯಾಸೀನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚಿನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಯು.ಟಿ. ಖಾದರ್ ಅವರು ನೀಡಿದ್ದಾರೆ ಎನ್ನಲಾದ ಕೆಲವು ಹೇಳಿಕೆಗಳು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಗುಂಪು, ಸ್ಪೀಕರ್ ಸಾಗುವ ಮಾರ್ಗದಲ್ಲಿ ಜಮಾಯಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಲು ಮುಂದಾಗಿತ್ತು ಎನ್ನಲಾಗಿದೆ.

ದೂರಿನ ಅನ್ವಯ ಜುನೈದ್ ಮತ್ತು ಇತರ 10 ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!