ಉಡುಪಿ: ಜಿಲ್ಲೆಯ ಜನರು ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕಾಗಿ ಮನೆಯನ್ನು ಲಾಕ್ ಮಾಡಿ ಹೊರಹೋಗುವಾಗ ಕಳ್ಳರ ಭಯವಿಲ್ಲದೆ ನಿಶ್ಚಿಂತೆಯಿಂದ ಇರಬಹುದು. ಏಕೆಂದರೆ, ಇಂತಹ ಬೀಗ ಹಾಕಿದ ಮನೆಗಳ ಸುರಕ್ಷತೆಗಾಗಿ ಉಡುಪಿ ಜಿಲ್ಲಾ ಪೊಲೀಸರು ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ (Locked House Beat System – LHBS) ಎನ್ನುವ ವಿನೂತನ ಯೋಜನೆಯನ್ನು ಆರಂಭಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಹರಿರಾಂ ಶಂಕರ್, ಸಾರ್ವಜನಿಕರು ಮನೆಯನ್ನು ಲಾಕ್ ಮಾಡಿ ಹೋದಾಗ ಆ ಮನೆಯ ಮೇಲೆ ಪೊಲೀಸರು ವಿಶೇಷ ನಿಗಾ ಇರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಯಾವ ಮನೆಗಳು ಲಾಕ್ ಆಗಿವೆಯೋ, ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ಸಿಬ್ಬಂದಿಯು ಆ ಮನೆಗೆ ಹಗಲು ಮತ್ತು ರಾತ್ರಿ ವೇಳೆ ಭೇಟಿ ನೀಡಲಿದ್ದಾರೆ. ಮನೆಯ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಸಾರ್ವಜನಿಕರು ಏನು ಮಾಡಬೇಕು?
ಈ ಸೌಲಭ್ಯವನ್ನು ಪಡೆಯಲು ಸಾರ್ವಜನಿಕರು ಕೆಲವು ಸರಳ ಹಂತಗಳನ್ನು ಅನುಸರಿಸಬೇಕಾಗುತ್ತದೆ. ಮನೆಯನ್ನು ಲಾಕ್ ಮಾಡಿ ಹೊರಡುವ ಮೊದಲು ಉಡುಪಿ ಜಿಲ್ಲಾ ನಿಯಂತ್ರಣ ಕೊಠಡಿಯ ವಿಶೇಷ ದೂರವಾಣಿ ಸಂಖ್ಯೆ 0820-2526709 ಗೆ ಕರೆ ಮಾಡಬೇಕು.
ನಿಯಂತ್ರಣ ಕೊಠಡಿಯಿಂದ ನೀಡಲಾಗುವ ವಾಟ್ಸಾಪ್ ಸಂಖ್ಯೆಗೆ ನೀವು ಮನೆಯಿಂದ ತೆರಳುವ ಮತ್ತು ಮರಳಿ ಬರುವ ದಿನಾಂಕ ಹಾಗೂ ಸಮಯವನ್ನು ತಿಳಿಸಬೇಕು. ಮನೆಯ ನಿಖರವಾದ ವಿಳಾಸ ಹಾಗೂ ಗುರುತಿಗಾಗಿ ಮನೆಯ ಮುಂಭಾಗ ನಿಂತು ತೆಗೆದ ಒಂದು ಸೆಲ್ಫಿ ಫೋಟೋವನ್ನು ವಾಟ್ಸಾಪ್ ಮಾಡಬೇಕು.

ಸಾರ್ವಜನಿಕರು ನೀಡಿದ ಮಾಹಿತಿಯನ್ನು ಜಿಲ್ಲಾ ನಿಯಂತ್ರಣ ಕೊಠಡಿಯು ಸಂಬಂಧಪಟ್ಟ ಪೊಲೀಸ್ ಠಾಣೆಗೆ ರವಾನಿಸುತ್ತದೆ. ತಕ್ಷಣವೇ ಆ ಮನೆಯ ವ್ಯಾಪ್ತಿಯ ಬೀಟ್ ಸಿಬ್ಬಂದಿಗೆ ಸೂಚನೆ ನೀಡಲಾಗುವುದು. ನೀವು ನೀಡಿದ ಅವಧಿಯವರೆಗೆ ಪೊಲೀಸರು ನಿಮ್ಮ ಮನೆಗೆ ಭದ್ರತೆ ಒದಗಿಸಲಿದ್ದಾರೆ. ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಲ್ಲಿ ಭರವಸೆ ಮೂಡಿಸಲು ಪೊಲೀಸ್ ಇಲಾಖೆ ಕೈಗೊಂಡಿರುವ ಈ ಜನಸ್ನೇಹಿ ಕ್ರಮಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
