ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್‌ ಬೈಕ್‌ ಸ್ಫೋಟಗೊಂಡು ಮಾಲಿಕ ಸಾ*ವು!!

ಬೆಂಗಳೂರು: ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕಲ್‌ ಬೈಕ್‌ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಹಲಸೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಲಸೂರಿನ ಮರ್ಸಿಟೌನ್‌ ನಿವಾಸಿ ಲೂರ್ದ್‌ ನಾಥನ್‌ (65) ಮೃತ ದುರ್ದೈವಿ.

ಆಟೋ ರಿಕ್ಷಾ ಚಾಲಕರಾಗಿದ್ದ ಲೂರ್ದ್‌ ನಾಥನ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ಆಟೋ ಚಾಲನೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದರು. ಲೂರ್ದ್‌ ನಾಥನ್‌ ಅವರ ಮಗ ಬಳಸುವಂತಹ ಒಕಿನೋವ ಎಂಬ ಕಂಪನಿಯ ಎಲೆಕ್ಟ್ರಿಕಲ್‌ ಬೈಕ್‌ಗೆ ಸೋಮವಾರ(ಮೇ 11) ರಾತ್ರಿ 11 ಗಂಟೆಯ ಸುಮಾರಿಗೆ ಎಂದಿನಂತೆ ತಮ್ಮ ಚಿಕ್ಕದಾದ ಮನೆಯ ಒಳಗಡೆಯೇ ಚಾರ್ಜ್‌ಗೆ ಹಾಕಿ ಮಲಗಿದ್ದರು.

ಮಧ್ಯರಾತ್ರಿ 3 ಗಂಟೆಗೆ ಏಕಾಏಕಿ ಬೈಕ್‌ ವಾಹನ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಮಲಗಿದ್ದ ಲೂರ್ದ್‌ ನಾಥನ್‌ಗೆ ಮೈ ಎಲ್ಲಾ ಸುಟ್ಟಗಾಯಗಳಾಗಿದೆ. ಸ್ಫೋಟದ ಶಬ್ದ ಕೇಳಿ ಮನೆಯ ಮೊದಲ ಮಹಡಿಯಲ್ಲಿದ್ದ ಮಗ ಮತ್ತು ಸೊಸೆ ಬಂದು ನೋಡಿದ್ದಾಗ ಲೂರ್ದ್‌ನಾಥನ್‌ ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದರು.

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಟೀವಿ ಮತ್ತು ಹಾಸಿಗೆಗೆ ತಗುಲಿ ಹೊತ್ತಿ ಉರಿದಿದೆ. ಬ್ಯಾಟರಿ ಓವರ್‌ ಪ್ಲೋ ಆಗಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಲೂರ್ದ್‌ ನಾಥನ್‌ ಪುತ್ರ ಫ್ರಾಂಕ್‌ ಆಟೋನಿ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

error: Content is protected !!