“ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು”: ತಮಿಳುನಾಡು ವಿಧಾನಸಭೆಯಲ್ಲಿ ಉದಯನಿಧಿ ಮತ್ತೆ ವಿಷಪೂರಿತ ಮಾತು!

ಚೆನ್ನೈ: ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್ ಅವರು ʻಸನಾತನ ಧರ್ಮ’ದ ವಿರುದ್ಧ ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ. ಮಂಗಳವಾರ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಜನರ ನಡುವೆ ಭೇದಭಾವ ಸೃಷ್ಟಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು” ಎಂದು ತಮ್ಮ ಹಳೆಯ ನಿಲುವನ್ನು ಪುನರುಚ್ಚರಿಸಿದ್ದಾರೆ.

ಉದಯನಿಧಿ ಅವರ ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಪ್ರತಿಕ್ರಿಯಿಸಿ, “ಉದಯನಿಧಿ ಸ್ಟಾಲಿನ್ ತಮಿಳುನಾಡಿನ ರಾಹುಲ್ ಗಾಂಧಿಯಂತೆ ವರ್ತಿಸುತ್ತಿದ್ದಾರೆ. ಅವರು ಸದಾ ವಿಭಜಕ ಮತ್ತು ದ್ವೇಷದ ರಾಜಕೀಯವನ್ನು ಹರಡುತ್ತಿದ್ದಾರೆ. ತಮಿಳುನಾಡಿನ ರಾಜ್ಯ ಲಾಂಛನದಲ್ಲೇ ದೇವಸ್ಥಾನದ ಗೋಪುರವಿದೆ ಎಂಬುದು ಅವರಿಗೆ ನೆನಪಿರಲಿ. ಜನರ ನಂಬಿಕೆಯನ್ನು ಅವಮಾನಿಸುತ್ತಿರುವ ಇವರನ್ನು ತಮಿಳುನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಟ ವಿಜಯ್ ನೇತೃತ್ವದ ʻತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಅಧಿವೇಶನ ಇದಾಗಿದೆ. ಸಾವಿರ ದೀಪಗಳ (Thousand Lights) ಕ್ಷೇತ್ರದಿಂದ ಆಯ್ಕೆಯಾಗಿರುವ ಟಿವಿಕೆ ಶಾಸಕ ಜೆ.ಸಿ.ಡಿ. ಪ್ರಭಾಕರ್ ಅವರು ವಿಧಾನಸಭೆಯ ನೂತನ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಈ ವೇಳೆ ಮಾತನಾಡಿದ ಉದಯನಿಧಿ, ಆಡಳಿತ ಮತ್ತು ವಿರೋಧ ಪಕ್ಷಗಳು ರಾಜ್ಯದ ಅಭಿವೃದ್ಧಿಗಾಗಿ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ತಮಿಳುನಾಡಿನ ರಾಜ್ಯ ಗೀತೆಗಿಂತ ಮೊದಲು ʻವಂದೇ ಮಾತರಂ’ ಗೀತೆಯನ್ನು ಹಾಡಿರುವುದಕ್ಕೆ ಉದಯನಿಧಿ ಸ್ಟಾಲಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಮ್ಮ ರಾಜ್ಯದ ಸಂಸ್ಕೃತಿಯ ಸಂಕೇತವಾಗಿರುವ ತಮಿಳು ಗೀತೆಯನ್ನು ಎರಡನೇ ಸ್ಥಾನಕ್ಕೆ ತಳ್ಳಬಾರದು. ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಇಂತಹ ಸಂಪ್ರದಾಯವಿಲ್ಲ. ರಾಜ್ಯದ ಅಸ್ಮಿತೆಯನ್ನು ಕಾಪಾಡುವುದು ಸರ್ಕಾರದ ಆದ್ಯತೆಯಾಗಲಿ” ಎಂದು ಅವರು ಸದನದಲ್ಲಿ ಒತ್ತಾಯಿಸಿದರು.

error: Content is protected !!