ಎರಡು ತಲೆಗಳು ಉರುಳಲಿವೆ, ಅರಮನೆ-ಪಟ್ಟದ ಆನೆ ಕಥೆ ಕೇಳಿ! ಈ ಬಾರಿಯೂ ಅಪಶಕುನ ನುಡಿದ ಕೋಡಿಮಠ ಶ್ರೀ

ಬೆಂಗಳೂರು: ಅಪಶಕುನ ನುಡಿಯುವಲ್ಲಿಯೇ ಖ್ಯಾತಿ ಪಡೆದಿರುವ ಕೋಡಿ ಮಠದ ಶ್ರೀಗಳು ಮಳೆಗಾಲ ಆರಂಭಕ್ಕೂ ಮುನ್ನ ಮತ್ತೆ ಅಪಶಕುನ ನುಡಿದಿದ್ದಾರೆ. ಕೋಡಿಮಠದ ಶ್ರೀಗಳು ಮತ್ತೆ ಮೈಕ್ ಹಿಡಿದಿದ್ದಾರೆ ಎಂದರೆ ಅಲ್ಲಿ ನೆಮ್ಮದಿಗೆ ಜಾಗವಿಲ್ಲ ಎಂದೇ ಅರ್ಥ. “ಮಳೆ ಬಂದರೂ ಕಷ್ಟ, ಬರದಿದ್ದರೂ ನಷ್ಟ” ಎನ್ನುವ ಅವರ ವಿಶಿಷ್ಟ ಫಾರ್ಮುಲಾದಲ್ಲಿ ಈ ಬಾರಿ ʻಜಲ ಕಂಟಕ’ ಎಂಬ ಹೊಸ ಪದ ಸೇರ್ಪಡೆಯಾಗಿದೆ.

ಇನ್ನು ಶ್ರೀಗಳ ರಾಜಕೀಯದ ‘ಪಜಲ್’ ಅಥವಾ ಒಗಟುಗಳು ಎಂಥವರನ್ನೂ ತಲೆಕೆರೆದುಕೊಳ್ಳುವಂತೆ ಮಾಡುತ್ತವೆ. “ಅರಸನ ಅರಮನೆ ಕಳೆಗುಂದಿತು, ಪಟ್ಟದ ಆನೆ ಗಂಭೀರವಾಗಿ ನಡೆಯಿತು…” ಈ ಸಾಲುಗಳನ್ನ ಕೇಳಿದ್ರೆ ಯಾವುದೋ ಹಳೆಯ ಕಾಲದ ಜಾನಪದ ಕಥೆಯಂತೆ ಕಾಣುತ್ತದೆ. ಆದರೆ ಇದರ ಹಿಂದಿರೋ ವ್ಯಂಗ್ಯ ಅಂದ್ರೆ—ಕುರ್ಚಿ ಮೇಲೆ ಯಾರೇ ಇರಲಿ, ಅವರ ಅರಮನೆ ಯಾವತ್ತೋ ಒಂದು ದಿನ ಕಳೆಗುಂದಲೇಬೇಕು ಅಲ್ವಾ? ಪಟ್ಟದ ಆನೆ ಗಂಭೀರವಾಗಿ ನಡೆಯದೆ ಕುಣಿಯೋಕೆ ಸಾಧ್ಯವೇ? ಇಂತಹ ಯೂನಿವರ್ಸಲ್ ಸತ್ಯಗಳನ್ನು ಸ್ಫೋಟಕ ಭವಿಷ್ಯ ಅಂತ ನಂಬುವ ಭಕ್ತಾದಿಗಳೇ ಈ ನಾಡಿನ ದೊಡ್ಡ ಆಸ್ತಿ!

ವಿಶೇಷ ಅಂದ್ರೆ, ಶ್ರೀಗಳ ಭವಿಷ್ಯದಲ್ಲಿ ಯಾವಾಗಲೂ “ಎರಡು ತಲೆಗಳು ಉರುಳುತ್ತವೆ” ಅಥವಾ “ದೊಡ್ಡ ಅನಾಹುತ ಕಾದಿದೆ” ಎಂಬ ಮಾತುಗಳು ಕಾಮನ್ ಆಗಿರುತ್ತವೆ. ಆದರೆ ಆ ತಲೆಗಳು ಯಾರದ್ದು? ಆ ಅನಾಹುತ ಯಾವಾಗ ಸಂಭವಿಸುತ್ತೆ? ಎಂಬ ಪ್ರಶ್ನೆಗಳಿಗೆ ಉತ್ತರ ಮಾತ್ರ ಯಾವತ್ತೂ ಮಾರ್ಮಿಕವಾಗಿ’ ಇರುತ್ತದೆ. ಅಂದ್ರೆ, ಯಾವಾಗಲಾದರೂ ಯಾರದ್ದಾದರೂ ತಲೆ ಉರುಳಿದಾಗ “ನೋಡಿ ನಾನು ಆಗಲೇ ಹೇಳಿರಲಿಲ್ಲವೇ?” ಅಂತ ಕ್ರೆಡಿಟ್ ತಗೊಳ್ಳೋಕೆ ಇದೊಂದು ಭರ್ಜರಿ ಐಡಿಯಾ! ಸತ್ಯ ಕಹಿ ಅಂತ ಅವರು ಹೇಳ್ತಾರೆ, ಆದರೆ ಅವರು ನುಡಿಯೋ ಭವಿಷ್ಯ ಕೇಳಿ ಕೇಳಿ ಜನರಿಗೆ ಈಗ ಸಕ್ಕರೆ ಕಾಯಿಲೆ ಬರೋ ರೇಂಜಿಗೆ ಬೇಸತ್ತು ಹೋಗಿದ್ದಾರೆ.

ಒಟ್ಟಿನಲ್ಲಿ, ಭೂಕಂಪವಾಗಲಿ, ಯುದ್ಧವಾಗಲಿ ಇಲ್ಲವೇ ಅಕ್ಕಿ ಬೆಲೆ ಏರಿಕೆಯಾಗಲಿ—ಕೋಡಿಮಠದ ಶ್ರೀಗಳ ಹತ್ತಿರ ಅದಕ್ಕೊಂದು “ನಾನು ಮೊದಲೇ ಹೇಳಿದ್ದೆ” ಎಂಬ ಬ್ರ್ಯಾಂಡ್ ಇರುತ್ತದೆ. ನಮಗಂತೂ ಒಂದು ಆಸೆ, ಯಾವುದಾದರೂ ಒಂದು ದಿನ ಶ್ರೀಗಳು ಮೈಕ್ ಹಿಡಿದು “ಮುಂದಿನ ಒಂದು ವರ್ಷ ದೇಶದಲ್ಲಿ ಎಲ್ಲವೂ ಚೆನ್ನಾಗಿರುತ್ತೆ, ಎಲ್ಲರೂ ಸುಖವಾಗಿರ್ತೀರಾ” ಅನ್ನೋ ಒಂದು ಶುಭ ಶಕುನದ ಮಾತು ಹೇಳಲಿ. ಆದರೆ ಹಾಗೆ ಹೇಳಿದ್ರೆ ಅವರಿಗೆ ಕಿಕ್ ಸಿಗೋದಿಲ್ಲವೇನೋ!

error: Content is protected !!