
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಕೇವಲ ವಾಹನಗಳ ಟ್ಯಾಂಕ್‌ಗಳಿಗೆ ಮಾತ್ರ ಪೂರೈಸಬೇಕು. ಸುರಕ್ಷತೆಯ ದೃಷ್ಟಿಯಿಂದ ಬಾಟಲಿಗಳು, ಕ್ಯಾನ್‌ಗಳು ಅಥವಾ ಇತರ ಯಾವುದೇ ಅನಧಿಕೃತ ಕಂಟೇನರ್‌ಗಳಲ್ಲಿ ಇಂಧನ ನೀಡುವುದನ್ನು ನಾಗರಿಕ ಹಾಗೂ ಆಹಾರ ಸರಬರಾಜು ಇಲಾಖೆಯು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಗ್ರಾಹಕರ ಹಿತದೃಷ್ಟಿಯಿಂದ ಹಾಗೂ ಸುರಕ್ಷತೆಯ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಇಂಧನ ವಿತರಣಾ ಕೇಂದ್ರಗಳಿಗೆ ಪ್ರಮುಖ ಸೂಚನೆಗಳನ್ನು ನೀಡಲಾಗಿದೆ. ಇಲಾಖೆಯ ಈ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ನಿಯಮ ಉಲ್ಲಂಘಿಸುವ ಪೆಟ್ರೋಲ್ ಬಂಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಪೆಟ್ರೋಲಿಯಂ ನಿಯಮಗಳು 2002ರ ಅನ್ವಯ, ಇಂಧನ ಕೇಂದ್ರಗಳು ವಾಹನಗಳ ಟ್ಯಾಂಕ್‌ಗಳಿಗೆ ಅಥವಾ ಅಧಿಕೃತ ಕಂಟೇನರ್‌ಗಳಿಗೆ ಮಾತ್ರ ಇಂಧನ ತುಂಬಿಸಬೇಕು. ಇದಕ್ಕೆ ಗರಿಷ್ಠ 200 ಲೀಟರ್‌ಗಳ ಮಿತಿಯನ್ನು ಹೇರಲಾಗಿದೆ.

ರಿಟೇಲ್ ಔಟ್‌ಲೆಟ್‌ಗಳು ದೊಡ್ಡ ಮಟ್ಟದ ಇಂಧನ ಪೂರೈಕೆ ಮಾಡುವಂತಿಲ್ಲ. ಅಂತಹ ವ್ಯವಹಾರಗಳನ್ನು ಕೇವಲ “ನೇರ ಮಾರಾಟ ಕಾರ್ಯವಿಧಾನ”ಗಳ ಮೂಲಕವೇ ನಡೆಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿ ಬಲ್ಕ್ ಮಾರಾಟ ಮಾಡಿದರೆ ಪರವಾನಗಿ ರದ್ದತಿಯಂತಹ ಗಂಭೀರ ಕ್ರಮ ಎದುರಿಸಬೇಕಾಗುತ್ತದೆ. ಕೃಷಿ ಚಟುವಟಿಕೆಗಳಿಗೆ ಹಾಗೂ ಜಲಚರ ಸಾಕಣೆಗೆ ಅಗತ್ಯವಿರುವ ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಧಿಕಾರಿಗಳು ಗಮನಹರಿಸಬೇಕು. ರೈತರ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತವಾಗಿ ಇಂಧನ ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.

ಬಲ್ಕ್ ಕಾರ್ಯಾಚರಣೆಗಳಲ್ಲಿ ಅವ್ಯವಹಾರ ನಡೆದರೆ ಅದು ಸುರಕ್ಷತೆ ಮತ್ತು ಲೈಸೆನ್ಸಿಂಗ್ ನಿಯಮಗಳ ಗಂಭೀರ ಉಲ್ಲಂಘನೆಯೆಂದು ಪರಿಗಣಿಸಲಾಗುವುದು.