ನವದೆಹಲಿ: ವಿದೇಶಿ ವಿನಿಮಯ ಉಳಿಸುವ ನಿಟ್ಟಿನಲ್ಲಿ ಇಂಧನ ಮತ್ತು ಚಿನ್ನದ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಯ ಬೆನ್ನಲ್ಲೇ ಸಾರ್ವಜನಿಕರಲ್ಲಿ ಉಂಟಾಗಿರುವ ಆತಂಕವನ್ನು ನಿವಾರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿಯವರ ಮನವಿಯು ಆರ್ಥಿಕ ಶಿಸ್ತಿಗಾಗಿಯೇ ಹೊರತು, ದೇಶದಲ್ಲಿ ಯಾವುದೇ ವಸ್ತುಗಳ ಕೊರತೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಧಾನಿಯವರ ಭಾಷಣದ ನಂತರ ಜನರು ಪೆಟ್ರೋಲ್ ಬಂಕ್‌ಗಳಿಗೆ ಮುಗಿಬೀಳುವ ಅಥವಾ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಡುವ (Panic Buying) ಸಾಧ್ಯತೆಯಿದೆ ಎಂಬ ಮುನ್ಸೂಚನೆಯನ್ನು ಅರಿತ ಸರ್ಕಾರ, “ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ” ಎಂದು ಹೇಳಿದೆ. ಭಾರತದಲ್ಲಿ ಪ್ರಸ್ತುತ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ (LPG) ದಾಸ್ತಾನು ಸಮರ್ಪಕವಾಗಿದ್ದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ರಾಷ್ಟ್ರ ಮೊದಲು, ಕರ್ತವ್ಯದ ಮುಂದೆ ಆರಾಮ ಗೌಣ” ಎಂಬ ಮಂತ್ರದಡಿ ಪ್ರಧಾನಿಯವರು ನೀಡಿದ ಏಳು ಕರೆಗಳು ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ನಾಗರಿಕರಲ್ಲಿ ಜವಾಬ್ದಾರಿಯನ್ನು ಮೂಡಿಸುವ ಉದ್ದೇಶ ಹೊಂದಿವೆ. ಪಶ್ಚಿಮ ಏಷ್ಯಾದ ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿ ಏರುಪೇರಾಗುವ ಮುನ್ಸೂಚನೆ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಸ್ವಾವಲಂಬನೆ ಮತ್ತು ಮಿತಬಳಕೆಗೆ ಒತ್ತು ನೀಡಲಾಗಿದೆ ಎಂದು ಸರ್ಕಾರ ವಿವರಿಸಿದೆ.

ಸಾರ್ವಜನಿಕರು ಮಾಡುವ ಸಣ್ಣ ಸಣ್ಣ ಬದಲಾವಣೆಗಳು ಅಂದರೆ, ಸಾರ್ವಜನಿಕ ಸಾರಿಗೆ ಬಳಸುವುದು, ಅನಗತ್ಯ ವಿದೇಶಿ ಪ್ರವಾಸ ಮತ್ತು ಚಿನ್ನದ ಖರೀದಿಯನ್ನು ಮುಂದೂಡುವುದರಿಂದ ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು (Forex Reserves) ಸಂರಕ್ಷಿಸಬಹುದು. ಇದು ರೂಪಾಯಿ ಮೌಲ್ಯವನ್ನು ಸ್ಥಿರವಾಗಿಡಲು ಸಹಕಾರಿಯಾಗಲಿದ್ದು, ದೇಶದ ಆರ್ಥಿಕತೆಯನ್ನು ಯುದ್ಧದಂತಹ ಕಠಿಣ ಸಮಯದಲ್ಲಿ ಸದೃಢವಾಗಿರಿಸಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಇಂಧನ ಉಳಿತಾಯಕ್ಕಾಗಿ ವರ್ಕ್ ಫ್ರಮ್ ಹೋಮ್ (WFH) ಮತ್ತು ಕೃಷಿಯಲ್ಲಿ ಆಮದು ಮಾಡಿಕೊಂಡ ರಾಸಾಯನಿಕ ಗೊಬ್ಬರಗಳ ಬಳಕೆ ತಗ್ಗಿಸಿ ನೈಸರ್ಗಿಕ ಕೃಷಿಗೆ ಒತ್ತು ನೀಡುವಂತೆ ಪ್ರಧಾನಿ ಕೋರಿದ್ದರು. ಇದು ಕೇವಲ ಸರ್ಕಾರದ ಮಟ್ಟದ ನಿಯಮಗಳಲ್ಲ, ಬದಲಾಗಿ ದೇಶದ ಆರ್ಥಿಕ ಸುರಕ್ಷತೆಗಾಗಿ ಜನರು ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳಬೇಕಾದ ಅಭಿಯಾನವಾಗಿದೆ ಎಂದು ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.