ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಬಳಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕಾರು ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ವಹಾನ ಸಮೇತ ಪರಾರಿಯಾಗಿದ್ದಾನೆ. ಗ್ಯಾರೇಜ್‌ನಲ್ಲಿ ಮೆಕ್ಯಾನಿಲ್ ಆಗಿರುವ ಪಾದೂರು ನಿವಾಸಿ ಪ್ರವೀಣ್ ಆಚಾರ್ಯ ಗಾಯಗೊಂಡವರು ಎಂದು ತಿಳಿದುಬಂದಿದೆ.



ಪಾದೂರು ಮೂಲದ ಪ್ರವೀಣ್ ಆಚಾರ್ಯ ಅವರು ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಇಂದು ಎಂದಿನಂತೆ ತಮ್ಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದರು. ಪಾಂಗಾಳ ಸಮೀಪ ತಲುಪಿದಾಗ ಅತಿ ವೇಗವಾಗಿ ಬಂದ ಕಾರೊಂದು ಇವರ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪ್ರವೀಣ್ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಸ್ವರೂಪದ ಗಾಯಗಳಾಗಿವೆ.

ಅಪಘಾತ ನಡೆದ ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ಮಾನವೀಯತೆ ತೋರದ ಕಾರು ಚಾಲಕ, ಅಪಘಾತದ ಜಾಗದಿಂದ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ನಾಪತ್ತೆಯಾಗಿದ್ದಾನೆ. ಗಾಯಗೊಂಡು ಬಿದ್ದಿದ್ದ ಪ್ರವೀಣ್ ಅವರನ್ನು ಗಮನಿಸಿದ ಸ್ಥಳೀಯರು ತಕ್ಷಣ ಸಹಾಯಕ್ಕೆ ಧಾವಿಸಿ, ಆಂಬ್ಯುಲೆನ್ಸ್ ಮೂಲಕ ಉಡುಪಿಯ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾದ ಕಾರನ್ನು ಪತ್ತೆಹಚ್ಚಲು ಪಾಂಗಾಳ ಮತ್ತು ಕಾಪು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
